ವೀರಾಜಪೇಟೆ, ಸೆ.13: ಕಾವೇರಿ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ವೀರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ವೀರಾಜಪೇಟೆ ಕಾವೇರಿ ಕಾಲೇಜು ಮೈದಾನದಲ್ಲಿ ಅಂತರ ಕಾಲೇಜು ಕ್ರೀಡಾ ಕೂಟವನ್ನು ತಾ. 18ರಿಂದ 21ರವರೆಗೆ ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲ ಎನ್.ಎಂ. ನಾಚಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾ. 18ರಂದು ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಕಾವೇರಿ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ ಅಜ್ಜಿನಿಕಂಡ ಸಿ. ಗಣಪತಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಕೆ.ಜಿ ಬೋಪಯ್ಯ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಟಿ ಸ್ವಾಮಿ, ಕಾವೇರಿ ವಿದ್ಯಾಸಂಸ್ಥೆಯ ಕುಲ್ಲಚಂಡ ಬೋಪಣ್ಣ, ಮಡಿಕೇರಿ ಆರ್‍ಎಂಸಿ ಉಪಾಧ್ಯಕ್ಷ ಚೇನಂಡ ಗಿರೀಶ್, ಪ್ರಾಂಶುಪಾಲ ಎನ್.ಎಂ ನಾಣಯ್ಯ, ಮಾಜಿ ಅಂತರ್ರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಜಿ.ಡಿ ಪ್ರಥ್ವಿರಾಜ್ ಉಪಸ್ಥಿತರಿರುವರು. ಇದೇ ಸಂದರ್ಭ ಅಂತರ್ರಾಷ್ಟ್ರೀಯ ಫ್ಲೋರ್ ಬಾಲ್ ಆಟಗಾರ ಐತಿಚಂಡ ಪೂವಯ್ಯ, ಅಂತರ್ರಾಷ್ಟ್ರೀಯ ಸಾಫ್ಟ್‍ಬಾಲ್ ಕ್ರೀಡಾಪಟು ಭವ್ಯ ಇವರುಗಳನ್ನು ಸನ್ಮಾನಿಸಲಾಗುವದು ಎಂದರು.

ದೈಹಿಕ ಶಿಕ್ಷಕ ಎಂ.ಎ ನಾಚಪ್ಪ ಮಾತನಾಡಿ ಸಮಾರೋಪ ಸಮಾರಂಭ ತಾ. 21ರಂದು ಮಧ್ಯಾಹ್ನ 3 ಗಂಟೆಗೆ ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ನಡೆಯಲಿದೆ. ಸಭೆಯ ಅಧ್ಯಕ್ಷತೆಯನ್ನು ವೀರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಣಯ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾವೇರಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಕುಟ್ಟಂಡ ವಿಜು ಉತ್ತಪ್ಪ, ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಣ್ಣುವಂಡ ರತನ್ ಮಾದಯ್ಯ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೊ: ಯು.ಆರ್ ಉಷಾಲತಾ, ದೈಹಿಕ ಶಿಕ್ಷಣ ನಿರ್ದೇಶಕ ಡಾ ಎಂ.ಎಂ ದೇಚಮ್ಮ ಉಪಸ್ಥಿತರಿರುವರು ಎಂದು ಹೇಳಿದರು.

ಗೋಷ್ಠಿಯಲ್ಲಿ ಉಪನ್ಯಾಸಕರಾದ ಕರಣ್ ಕುಮಾರ್, ಎನ್.ಸಿ ಜೀವನ್ ಉಪಸ್ಥಿತರಿದ್ದರು.