ಮಡಿಕೇರಿ, ಸೆ. 13: ಭರತ ಭೂಮಿಯಲ್ಲಿ ಅತ್ಯಂತ ಪೂಜನೀಯ ಸ್ಥಾನ ಪಡೆದಿರುವ ನದಿಗಳು ಹಾಗೂ ತೀರ್ಥ ಸ್ನಾನಗಳ ಮಹತ್ವವನ್ನು ಸಾರುವ ಪುಷ್ಕರ ಸ್ನಾನವು (ಪವಿತ್ರ ಸ್ನಾನ) ಈ ವರ್ಷ ಕೊಡಗಿನ ಕುಲಮಾತೆ ಕಾವೇರಿಗೆ ಸಲ್ಲುತ್ತದೆ. ಪ್ರತಿ ಹನ್ನೆರಡು ವರ್ಷಗಳಿಗೆ ಒಮ್ಮೆ ಪ್ರಾಪ್ತವಾಗುವ ಈ ಪುಣ್ಯ ಫಲ ಪ್ರಸಕ್ತ ವರ್ಷದ ಕಾವೇರಿ ಸ್ನಾನದಿಂದ ಮನುಕುಲ ಮತ್ತು ಜೀವ ಸಂಕುಲಕ್ಕೆ ಲಭಿಸಲಿದೆ ಎಂಬದು ದಾರ್ಶನಿಕರ ನಂಬಿಕೆ. ಹಾಗಾಗಿಯೇ ನಿನ್ನೆಯಿಂದ ಕೊಡಗಿನ ತಲಕಾವೇರಿ - ಭಾಗಮಂಡಲದಲ್ಲಿ ಜಾತ್ರೆಯ ಸಂಭ್ರಮದೊಂದಿಗೆ ಸಾವಿರಾರು ಸಂಖ್ಯೆಯ ಭಕ್ತರು ತೀರ್ಥ ಸ್ನಾನದೊಂದಿಗೆ ಪಿತೃ ಕಾರ್ಯದಲ್ಲಿ ತೊಡಗಿರುವ ದೃಶ್ಯ ಗೋಚರಿಸಿದೆ.

‘ಪುಷ್ಕರ’ವೇನು?: ಯುಗ ಯುಗಗಳ ನಂಬಿಕೆಯಂತೆ ಪುಷ್ಕರನೆಂಬ ಮಹರ್ಷಿ ‘ಇದಂ ಶರೀರಂ ಲೋಕೋಪಕಾರಾರ್ಥಂ’ ಎಂಬಂತೆ ಲೋಕ ಹಿತಕ್ಕಾಗಿಯೇ ಸಿದ್ಧಪುರುಷನಂತೆ ಸಾಧನೆಗಳಿಸಿದ್ದ. ಈತನ ಮೂಲ ಹೆಸರು ತುಂದಿಲನಂತೆ, ತನ್ನ ಶರೀರದ ಬಗ್ಗೆ ಪರಿವೆಯೇ ಇಲ್ಲದೆ ತಪೋನಿರತನಾಗಿ ಬ್ರಹ್ಮ, ವಿಷ್ಣು, ಮಹೇಶ್ವರರಾದ ತ್ರಿಮೂರ್ತಿಗಳನ್ನು ಓಲೈಸಿಕೊಳ್ಳುತ್ತಾನೆ. ತಪಸ್ಸಿಗೆ ಮೆಚ್ಚಿದ ತ್ರಿಮೂರ್ತಿಗಳು ಪ್ರತ್ಯಕ್ಷರಾಗಿ ಬೇಕಾದ ವರ ಪಡೆಯಲು ಹೇಳಿದರಂತೆ.

ಈ ವೇಳೆ ಗುರು ಸಿದ್ಧಿಯನ್ನು ಪಡೆದಿದ್ದ ತುಂದಿಲ ಲೋಕಕ್ಕೆ ಕ್ಷೇಮಕಾರಕವಾದ ಮತ್ತು ಪಂಚಭೂತಗಳಲ್ಲಿ ಅತ್ಯಂತ ಪವಿತ್ರವೆನಿಸಿದ ಜಲಾಧಿ ದೇವತೆಗಳನ್ನು ಸಾಕ್ಷೀಕರಿಸಿಕೊಳ್ಳುವ ವರ ಪಡೆದನಂತೆ. ಆ ಪ್ರಕಾರ ವರ್ಷವೊಂದಾವರ್ತಿಯಂತೆ ಗುರು ಗ್ರಹವು ತನ್ನ ಕಕ್ಷೆಯನ್ನು ಒಂದೊಂದು ರಾಶಿಗೆ ಪರಿಭ್ರಮಣಗೊಳಿಸುವ ಪರ್ವ ಕಾಲದಲ್ಲಿ ಪುಣ್ಯ ನದಿಗಳ ಪವಿತ್ರ ಸ್ನಾನದ ಮಹತ್ವ ಸಾರಿದನೆಂಬದು ಪ್ರತೀತಿ.

ಹೀಗೆ ನದಿ, ಸರೋವರ, ಕಡಲುವಿನಲ್ಲಿಯೂ, ಜಲಾಧಿದೇವತೆಗಳ ಅನುಗ್ರಹಕ್ಕೆ ಪಾತ್ರನಾದ ತುಂದಿಲ ಮಹರ್ಷಿ ಭವಿಷ್ಯದಲ್ಲಿ ಪುಷ್ಕರನೆಂದು ಖ್ಯಾತನಾಗುತ್ತಾನೆ. ವಿಶೇಷವಾಗಿ ನದಿ ತಟಗಳಲ್ಲಿ ದೇವಾನುದೇವತೆಗಳು ನೆಲೆ ನಿಂತು ನಿತ್ಯ ಸಂಚರಿಸುವ ನಂಬಿಕೆಯೂ ದಾರ್ಶನಿಕರದ್ದಾಗಿದೆ. ಅಂತೆಯೇ ಪುಷ್ಕರ ವರ್ಷವೊಂದಾವೃತಿ ಒಂದೊಂದು ನದಿ ತಟಗಳಲ್ಲಿ ಪವಿತ್ರ ತೀರ್ಥಸ್ನಾನ ಮಾಡುತ್ತಾ ಕಳೆದನಂತೆ. ಆ ಪ್ರಕಾರವಾಗಿ ಪುಷ್ಕರನು ಪುಷ್ಕಣಿ ಎಂಬ ಅನ್ವರ್ಥನಾಮದೊಂದಿಗೆ ಇಂದಿಗೂ ವರ್ಷವೊಂದಾವೃತಿ ಗುರು ಸ್ವರೂಪದಿಂದ ಪ್ರಮುಖ ನದಿಗಳನ್ನು 12 ರಾಶಿಗಳು ಪ್ರವೇಶಿಸುವ ಪುಣ್ಯ ಕಾಲದಲ್ಲಿ ಪವಿತ್ರ ತೀರ್ಥ ಸ್ನಾನ ಮಹತ್ವ ಪಡೆದುಕೊಂಡಿದೆ.

ಅಲ್ಲದೆ ಕುರುಕ್ಷೇತ್ರದಲ್ಲಿ ಪರಶುರಾಮನು ಅಂದು ದುಷ್ಟರನ್ನು ಸಂಹಾರಗೈದು, ತನ್ನ ಕೊಡಲಿಯನ್ನು ಶುಚಿಗೊಳಿಸಿ ರಕ್ತವನ್ನು ತೊಳೆದದ್ದು, ಪಾಂಡವರು ಕೌರವರ ನಾಶದ ಬಳಿಕ ಶ್ರೀಕೃಷ್ಣನ ಆಜ್ಞೆಯಂತೆ ಗತಿಸಿದವರಿಗೆ ಸದ್ಗತಿಗಾಗಿ ಪಿಂಡ ಪ್ರಧಾನ ಗೈದ ಬ್ರಹ್ಮಪುಷ್ಕರಿಣಿಯೂ ಪುಷ್ಕರ ಸ್ನಾನಕ್ಕೆ ಇಂದಿಗೂ ಮಹತ್ವಪಡೆದುಕೊಂಡಿದೆ.

ಹೀಗೆ ಪ್ರತಿವರ್ಷವು ಗುರು ಸ್ವರೂಪಿ ಪುಷ್ಕರ (ಗುರುಗ್ರಹ) ಒಂದೊಂದು ರಾಶಿಗೆ ತನ್ನ ಭ್ರಮಣ ನಡೆಸುತ್ತಿದ್ದಂತೆ, ಆಯಾ ರಾಶಿಯಲ್ಲಿ ಒಂದೊಂದು ನದಿಯೂ ಮಹತ್ವ ಪಡೆದುಕೊಂಡು ತೀರ್ಥ ಸ್ನಾನ ಮಹತ್ವ ಸಾರುತ್ತಾ, ಮಾನವನ ಇಷ್ಟಾರ್ಥ ಸಿದ್ಧಿ ಕರುಣಿಸಿ, ಲೋಕಕ್ಕೆ ಎದುರಾಗಲಿರುವ ಕಷ್ಟ ಕೋಟಲೆಗಳನ್ನು ಆ ಮಾತ್ರದಿಂದ ನಿವಾರಿಸುವ ನಂಬಿಕೆ ದಾರ್ಶನಿಕರದ್ದು. ಈ ಪುಷ್ಕರ ಸ್ನಾನದಿಂದ ತೀರ್ಥಕ್ಷೇತ್ರಗಳ ದರ್ಶನ ಭಾಗ್ಯದೊಂದಿಗೆ, ರೋಗ ದೋಷಗಳು ದೂರೀಕರಿಸಲ್ಪಟ್ಟ ಮನಃಶಾಂತಿ ಕ್ಷೇಮಕಾರರ ಬದುಕು ಲಭಿಸಲಿದೆ.

ಪುಷ್ಕರ ಮಹತ್ವ : ‘ಪುಷ್ಕರ’ ಪದಕ್ಕೆ ಪವಿತ್ರ ಜಲ ಎಂಬ ಅರ್ಥದೊಂದಿಗೆ ವಿಷ್ಣು ಮಹಾತ್ಮೆಯಲ್ಲಿ ಅನೇಕ ಕಡೆ ಭಗವಂತನನ್ನು ಈ ಹೆಸರಿನಲ್ಲಿ ಸ್ತುತಿಸಲ್ಪಟ್ಟಿದೆ. ಇನ್ನು ಪುಷ್ಕರಕ್ಕೆ ಆನೆಯ ಸೊಂಡಿಲು, ಕತ್ತಿಯ ಅಲಗು, ತಾವರೆ, ಕಮಲ, ಆಕಾಶ, ಹಸಿರುವನ ಮುಂತಾದ ಅನ್ವರ್ಥ ನಾಮಗಳೊಂದಿಗೆ ನದಿ ತಟ, ಔಷದೀಯ ಗಿಡ ಮೂಲಿಕೆಗಳ ಸ್ಥಳ, ಹೂಲತೆಗಳು, ಗಂಧರ್ವರು ಮುಂತಾಗಿ ಉಲ್ಲೇಖವಿದೆ.

ಶ್ಲೋಕವೊಂದರಲ್ಲಿ ‘ಪುಷ್ಕರಾಕ್ಷೇ ಜನಾರ್ಧನ, ಸ್ವಾಮಿ ಪುಷ್ಕರಿಣಿ ತೀರೇ ರಮಾಯಾ ಸಹವೇದಸೆ ಪುಷ್ಕರಾಸ್ವನ’ ಎಂದಿದೆ. ಒಟ್ಟಿನಲ್ಲಿ ಆನೆಗಳ ಹಿಂಡು ಓಡಾಡುವ ಜಾಗ, ಸಿಂಹಗಳ ಘರ್ಜನೆಗೆ ವೀರ ಕ್ಷತ್ರಿಯರು ಖಡ್ಗಗಳ ಜಳಪಿಸು ವದು, ನೀಲಾಕಾಶ, ತಂಗಾಳಿ ಪ್ರದೇಶ, ಇಂಪಾದ ಪಕ್ಷಿಗಳ ಕಲರವ, ಕಾಡು, ಮೇಡು, ಕಲ್ಲು ಬಂಡೆಗಳ ನಡುವೆ ಬೋರ್ಗರೆಯುವ ಜಲಧಾರೆಯ ನಿನಾದ, ಗೋವುಗಳ ಹಿಂಡಿನ ನಡುವೆ ಮೊಳಗುವ ವೇದಮಂತ್ರಗಳು, ಶಂಖ ಭೇರಿಗಳ ಉದ್ಘೋಷ, ದುಂಬಿಗಳ ಝೆಂಕಾರ, ಋಷಿಮುನಿಗಳ ತಪೋನೆಲ ಎಲ್ಲವೂ ಪುಷ್ಕರವೆನಸಿಕೊಳ್ಳಲಿವೆ.

ಈ ರೀತಿ ಭರತಭೂಮಿಯಲ್ಲಿ ನೆಲ, ಜಲ, ಪ್ರಕೃತಿಯ ಸಿರಿ, ಜೀವಸಂಕುಲಗಳ ನಡುವೆ ಇಂದಿನ ಕಲುಷಿತ ವಾತಾವರಣ, ವನನಾಶ, ನದಿ ಮಾಲಿನ್ಯ, ಪರಿಸರ ಮಾಲಿನ್ಯಗಳಿಗೆ ತಿಲಾಂಜಲಿಯಿತ್ತು ನಿರ್ಮಲ ಮನಸ್ಸಿನೊಂದಿಗೆ ಪವಿತ್ರ ತೀರ್ಥ ಸ್ನಾನದಿಂದ ಎಲ್ಲವನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಹಸ್ತಾಂತರಿಸಲು ಪ್ರೇರಣೆ ಸಿದ್ಧಿ, ಸಂಕಲ್ಪಕ್ಕೆ ಪ್ರೇರೇಪಿಸುವದು ಈ ಪುಷ್ಕರ ಸ್ನಾನ. ಅದು ಈ ಬಾರಿ ನಮ್ಮ ಕೊಡಗಿನ ಕಾವೇರಿಯ ಮಹತ್ವ ಸಾರುವದರೊಂದಿಗೆ, ಹೊರಗಿನಿಂದ ಇಲ್ಲಿಗೆ ಬರುವವರು ಕೇವಲ ಮೋಜು-ಮಸ್ತಿಯಲ್ಲದೆ, ಭಕ್ತಿ _ ಭಾವದಿಂದ ಕಾವೇರಿಯ ತಟದಲ್ಲಿ ಪೂಜೆ, ಪ್ರಾರ್ಥನೆ ಪಿತೃಕಾರ್ಯಗಳಿಗೆ ಮುಂದಾಗುತ್ತಾರೆ ಎಂಬದನ್ನು ಸಾರಲಿದೆ.

ಕಾವೇರಿಗೆ ಮಹತ್ವ : ಹೀಗಾಗಿ ಪ್ರಸಕ್ತ ಇದೇ ತಾ. 12 ರಿಂದ 23ರ ತನಕ ಕೊಡಗಿನ ಕುಲಮಾತೆ ಕಾವೇರಿ ತೀರದ ಪುಷ್ಕರ ಸ್ನಾನ ಮಹತ್ವ ಪಡೆದುಕೊಂಡಿದ್ದು, ಭಾರೀ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಆಗಮಿಸಿ ಪುಣ್ಯಸ್ನಾನ, ಕ್ಷೇತ್ರ ದರ್ಶನ, ಪಿತೃ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ದೃಶ್ಯ ಎದುರಾಗಿದೆ. ಈ ಬಾರಿಯ ಪುಷ್ಕರ ಸ್ನಾನದ ಬಳಿಕ ಇಂತಹ ಪುಣ್ಯ ತೀರ್ಥ ಸ್ನಾನ ಮತ್ತೆ ಲಭಿಸುವದು 2029ರ ಹೊತ್ತಿಗಷ್ಟೇ.

ಈ ಮಹತ್ವ ಅರಿತು ಎಲ್ಲರೂ ಇಂತಹ ತೀರ್ಥ ಸ್ನಾನದಿಂದ ತಮ್ಮ ತಮ್ಮ ಯೋಗ, ಕ್ಷೇಮ, ಸಿದ್ಧಿಗಳ ಜೊತೆಯಲ್ಲಿ ನಾಡಿನ, ರಾಷ್ಟ್ರದ, ಜಗತ್ತಿನ ಒಳಿತಿಗಾಗಿ ಪ್ರಾರ್ಥಿಸುತ್ತಾ ವಿಶ್ವಮಂಗಲದೆಡೆಗೆ ಸಾಗೋಣ. - ಶ್ರೀಸುತ