ನಾಪೋಕ್ಲು, ಸೆ. 8: ಕ್ಷುಲ್ಲಕ ಕಾರಣಕ್ಕೆ ಮೂವರು ಗ್ರಾ.ಪಂ. ಸಿಬ್ಬಂದಿ ಮೇಲೆ ನಡುಬೀದಿಯಲ್ಲಿ ಹಲ್ಲೆ ನಡೆಸಿರುವ ಘಟನೆ ಇಂದು ಅಪರಾಹ್ನ ನಾಪೋಕ್ಲು ಪಟ್ಟಣದಲ್ಲಿ ಸಂಭವಿಸಿದೆ. ಈ ಸಂಬಂಧ ನಾಪೋಕ್ಲು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಇಂದು ಅಪರಾಹ್ನ 3.30ರ ಸುಮಾರಿಗೆ ನಾಪೋಕ್ಲು ಗ್ರಾಮ ಲೆಕ್ಕಿಗ ಅನುಪ್ ಸಬಾಸ್ಟಿನ್ ಅವರು ತಮ್ಮ ಕಾರಿನಲ್ಲಿ ಬಲ್ಲಮಾವಟಿಯ ಗ್ರಾಮ ಸಹಾಯಕ ಪೂಣಚ್ಚ ಹಾಗೂ ಎಮ್ಮೆಮಾಡುವಿನ ಗ್ರಾಮ ಸಹಾಯಕ ಸೋಮಯ್ಯರೊಂದಿಗೆ ಬೇತುವಿನಲ್ಲಿ ಕಸ ಹಾಕಲು ಜಾಗ ಪರಿಶೀಲನೆಗೆ ಹೊರಟಿದ್ದಾರೆ.

ಈ ಸಂದರ್ಭ ನಾಪೋಕ್ಲು ಮುಖ್ಯ ರಸ್ತೆಯಲ್ಲಿ ಅನುಪ್ ಸಬಾಸ್ಟಿನ್ ಕಾರಿಗೆ ಎದುರಾಗಿ ಬಸ್ಸೊಂದು ಬಂದಿದ್ದರಿಂದ ಮಾರ್ಗ ಬಿಟ್ಟು ಕೊಡಲು ಪಕ್ಕಕ್ಕೆ ಚಾಲಿಸಿ ನಿಲ್ಲಿಸಿದ್ದು, ಈ ವೇಳೆ ಕಾರಿನ ಎದುರಿದ್ದ ಜಿ.ಪಂ. ಮಾಜೀ ಉಪಾಧ್ಯಕ್ಷ ಪಿ.ಎಂ. ಖಾಸಿಂ ತಮ್ಮ ಕಾರನ್ನು ಹಿಂತೆಗೆಯ ತೊಡಗಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಅಷ್ಟರಲ್ಲಿ ಅನುಪ್ ಜೋರಾಗಿ ಹಾರನ್ ಮಾಡಿದ್ದರೂ, ಲೆಕ್ಕಿಸದೆ, ಖಾಸಿಂ ಹಿಂದಕ್ಕೆ ಕಾರು ಚಾಲಿಸಿ ನಿಂತಿದ್ದ ಕಾರಿಗೆ ಡಿಕ್ಕಿಪಡಿಸಿದರೆಂದು ದೂರಿನಲ್ಲಿ ಆರೋಪಿಸಿದ್ದು, ಈ ವೇಳೆ ಕಾರಿನಿಂದ ಇಳಿದು ಬಂದ ಪಿ.ಎಂ. ಖಾಸಿಂ ಹಾಗೂ ಇತರ ಸುಮಾರು 25 ಮಂದಿ ಗುಂಪು ಹಲ್ಲೆ ನಡೆಸಿದರೆನ್ನಲಾಗಿದೆ.

ಹಲ್ಲೆಗೊಳಗಾದ ಮೂವರು ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸ್ ವೃತ್ರ ನಿರೀಕ್ಷಕ ಪ್ರದೀಪ್ ಕುಮಾರ್ ಹಾಗೂ ಸಿಬ್ಬಂದಿ ಹೇಳಿಕೆ ಪಡೆದುಕೊಂಡಿದ್ದಾರೆ.