ಮಡಿಕೇರಿ, ಸೆ. 8: ಮೂರ್ನಾಡು ಪಟ್ಟಣದಲ್ಲಿದ್ದ ಬಾರ್‍ವೊಂದನ್ನು ಮೂರ್ನಾಡು-ಕುಂಬಳದಾಳು ರಸ್ತೆಯಲ್ಲಿ ಆರಂಭಿಸಲು ಸಿದ್ಧತೆಗಳು ನಡೆದಿದೆ ಎಂದು ಆರೋಪಿಸಿರುವ ಕುಂಬಳದಾಳು, ಮುತ್ತಾರುಮುಡಿ ಹಾಗೂ ಹೊದ್ದೂರು ಗ್ರಾಮಸ್ಥರು ಯಾವದೇ ಕಾರಣಕ್ಕೂ ಮದ್ಯದಂಗಡಿಗೆ ಅನುಮತಿ ನೀಡಬಾರದೆಂದು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಬಿ. ದಿನೇಶ್ ಹಾಗೂ ನವಚೇತನ ಯುವಕ ಸಂಘದ ಅಧ್ಯಕ್ಷ ಡಿ.ಬಿ ರಾಜೇಶ್ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಬಾರ್ ತೆರೆಯುವದನ್ನು ತಡೆಯಬೇಕು ಎಂದು ಒತ್ತಾಯಿಸಿದರು. ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮಸ್ಥರು, ಸ್ತ್ರೀಶಕ್ತಿ, ಸ್ವಸಹಾಯ ಸಂಘಗಳ ಸದಸ್ಯರು, ವಿದ್ಯಾರ್ಥಿಗಳು ಸೇರಿ ತೀವ್ರ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದರು. ಇದೇ ರಸ್ತೆಯ ಪಕ್ಕದಲ್ಲಿ ಕೊಡವ ಸಮಾಜವಿದ್ದು, ಅಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಬರುವವರ ವಾಹನಗಳನ್ನು ಕೂಡಾ ಇದೇ ರಸ್ತೆ ಬದಿಯಲ್ಲಿ ನಿಲ್ಲಿಸಲಾಗುತ್ತಿದೆ. ಈ ಮಾರ್ಗದಲ್ಲಿ ಮೂರ್ನಾಡು- ನಾಪೋಕ್ಲು ನಡುವೆ ಏಕೈಕ ಬಸ್ ಓಡಾಡುತ್ತಿದ್ದು, ಅದರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದರೊಂದಿಗೆ ಬಾರ್ ಆರಂಭವಾದರೆ ಜನದಟ್ಟಣೆ ಮತ್ತು ವಾಹನಗಳಿಂದ ಮತ್ತಷ್ಟು ಅಡಚಣೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮೂರ್ನಾಡು ಮುಖ್ಯ ರಸ್ತೆಯಿಂದ ಕೇವಲ 200 ಮೀಟರ್ ದೂರದಲ್ಲಿ ಬಾರ್ ಆರಂಭಿಸಲಾಗುತ್ತಿದ್ದು, ಅಲ್ಲಿಂದ 200 ಮೀಟರ್ ದೂರದಲ್ಲಿ ವಿದ್ಯಾಸಂಸ್ಥೆ ಕೂಡಾ ಇದೆ. ಈ ಶಾಲೆಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಶಾಲೆಯ ವಾಹನಗಳು ಕೂಡಾ ಅದೇ ಮಾರ್ಗದಲ್ಲಿ ಸಂಚರಿಸಬೇಕಿದೆ. ಈ ಭಾಗದಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಿದ್ದು, ಬಾರ್‍ಗೆ ಬಂದಾಗ ಆಗಾಗ ಕಲಹಗಳು ಏರ್ಪಡುವ ಸಾಧ್ಯತೆಯೂ ಇದೆ. ಈ ಎಲ್ಲಾ ಕಾರಣಗಳಿಂದಾಗಿ ಮೂರ್ನಾಡು-ಕುಂಬಳದಾಳು ರಸ್ತೆಯಲ್ಲಿ ಬಾರ್ ಆರಂಭಿಸುವದಕ್ಕೆ ಗ್ರಾಮಸ್ಥರ ವಿರೋಧವಿದೆ ಎಂದು ತಿಳಿಸಿದರು. ಮತ್ತೊಂದೆಡೆ ಮೂರ್ನಾಡು ರಸ್ತೆಯಿಂದ ಕುಂಬಳದಾಳು ರಸ್ತೆಗೆ ತಿರುಗುವಲ್ಲಿ ಗಿರಣಿಯೊಂದಿದ್ದು, ಇದರಿಂದಾಗಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಈ ಮಾರ್ಗಕ್ಕೆ ಬದಲಾಗಿ, ಮಾರುಕಟ್ಟೆ ಹಿಂಭಾಗದಲ್ಲಿರುವ ಅರಮನೆ ಕಡಂಗವನ್ನು ತೆರವುಗೊಳಿಸಿ ಪರ್ಯಾಯ ರಸ್ತೆ ನಿರ್ಮಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದ್ದು, ಬೇಡಿಕೆಗೆ ಸ್ಪಂದಿಸಬೇಕೆಂದು ಅವರುಗಳು ಒತ್ತಾಯಿಸಿದರು.

ಮೂರ್ನಾಡು ಕೊಡವ ಸಮಾಜದವರು ತಮ್ಮಲ್ಲಿ ನಡೆಯುವ ಸಭೆ-ಸಮಾರಂಭಗಳ ಸಂದರ್ಭ ಗ್ರಾಮಸ್ಥರ ಹಿತದೃಷ್ಟಿಯಿಂದ ವಾಹನಗಳ ನಿಲುಗಡೆಗೆ ಪರ್ಯಾಯ ಸ್ಥಳವನ್ನು ಗೊತ್ತು ಪಡಿಸಬೇಕು ಎಂದು ಇದೇ ಸಂದರ್ಭ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಗ್ರಾಮದ ವಿವಿಧ ಸಂಘಟನೆಗಳ ಪ್ರಮುಖರಾದ ಡಿ.ಎಸ್. ಪೂಣಚ್ಚ, ತೆಕ್ಕಡೆ ಸುನಂದ, ಭೀಮರಾಜ್ ಹಾಗೂ ಲವ ಉಪಸ್ಥಿತರಿದ್ದರು.