ಭಾಗಮಂಡಲ, ಸೆ. 8: ತಾವೂರು ಗ್ರಾಮದ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನ ಆಡಳಿತ ಮಂಡಳಿಯ ವತಿಯಿಂದ ಪ್ರತಿ ವರ್ಷದಂತೆ, ಈ ವರ್ಷ ಕೈಲ್ ಮುಹೂರ್ತ ಹಬ್ಬದ ಕ್ರೀಡಾಕೂಟ ಮತ್ತು ಇತ್ತೀಚಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿ.ಹೆಚ್.ಡಿ. ಪದವಿಯನ್ನು ಪಡೆದಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಡಾ. ಕೆ.ಸಿ. ದಯಾನಂದ ಅವರಿಗೆ ಸನ್ಮಾನ ಮಾಡಿ ಗೌರವಿಸಿದರು. ಕ್ರೀಡಾಕೂಟದ ಅಂಗವಾಗಿ ತೆಂಗಿನ ಕಾಯಿಗೆ ಗುಂಡು ಹೊಡೆಯವದು, ಪುರುಷರಿಗೆ ಮತ್ತು ಮಹಿಳೆಯರಿಗೆ ಹಗ್ಗಜಗ್ಗಟ, ಓಟ, ಕಬಡ್ಡಿ, ನಾಣ್ಯ ಹುಡುಕುವದು, ಮಹಿಳೆಯರಿಗೆ ಸೂಜಿಗೆ ನೂಲು ಹಾಕುವದು, ನಿಂಬೆಹಣ್ಣು ಚಮಚ ಓಟ, ಮಕ್ಕಳಿಗೆ ಕಾಳು ಹೆಕ್ಕುವದು, ಮೂರು ಕಾಲಿನ ಓಟ, ವಿಷದ ಚೆಂಡು ಮೊದಲಾದ ಕ್ರೀಡಾ ಚಟುವಟಿಕೆಯನ್ನು ನಡೆಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕ್ರೀಡಾ ಚಟುವಟಿಕೆಯನ್ನು ಕಾವೇರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ದಾಮೋದರ, ಶಿಕ್ಷಕ ಕುದುಕುಳಿ ಕಿಶೋರ್ ಮತ್ತು ಅಮೆ ಮಹೇಶ್ ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಹೊಸಗದ್ದೆ ಭಾಸ್ಕರರವರು ವಹಿಸಿದ್ದರು. ಸನ್ಮಾನ ಸ್ವೀಕರಿಸಿದ ಡಾ. ಕೆ.ಸಿ. ದಯಾನಂದ ಮಾತನಾಡಿ, ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಓಳ್ಳೆಯ ಶಿಕ್ಷಣವನ್ನು ನೀಡಿದರೆ, ಮಕ್ಕಳು ಆಸ್ತಿಯಾಗುತ್ತಾರೆ. ಮಕ್ಕಳಲ್ಲಿ ತಂದೆ-ತಾಯಿ, ಗುರು-ಹಿರಿಯರಿಗೆ, ಶಿಕ್ಷಕರಿಗೆ ಗೌರವದಿಂದ ಕಾಣುವ ಮನಸ್ಥಿತಿಯನ್ನು ಬೆಳೆಸಬೇಕು ಎಂದರು. ಕಾರ್ಯಕ್ರಮದಲ್ಲಿ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನ ಆಡಳಿತ ಮಂಡಳಿಯ ಕಾರ್ಯದರ್ಶಿ ಗೌಡುಧರೆ ಎದುಕುಮಾರ್, ತಕ್ಕಮುಖ್ಯಸ್ಥ ಕುರುಂಜಿ ರಾಘವಯ್ಯ, ನಿರ್ದೇಶಕರಾದ ಹೊಸಗದ್ದೆ ಕುಮಾರ್, ಬಾರಿಕೆ ವೆಂಕಟರಮಣ, ಅಮೆ ಮಾದಪ್ಪ, ಅಮೆ ದೇವಯ್ಯ, ಅಮೆ ನವೀನ್, ಬಾರಿಕೆ ಚೆಂಗಪ್ಪ, ಕೂಡಕಂಡಿ ಸುಗೇಂದ್ರ, ಎಳ್ಮೆಕಾಲು ದಯಾನಂದ, ಗ್ರಾಮ ಪಂಚಾಯಿತಿ ಸದಸ್ಯ ರಾಜು ರೈ, ಪಾಪುಟ್ಟಿ ಮೊದಲಾದವರು ಉಪಸ್ಥಿತರಿದ್ದರು.