ಮಡಿಕೇರಿ, ಸೆ. 5: ರಾಜ್ಯ ಬಿಜೆಪಿ ಯುವ ಮೋರ್ಚಾ ಕರೆ ನೀಡಿರುವ ಮಂಗಳೂರು ಚಲೋ ಬೈಕ್ ರ್ಯಾಲಿಗೆ ಜಿಲ್ಲೆಯಿಂದಲೂ ತೆರಳುವ ಬಗ್ಗೆ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಸಿದ್ಧತೆ ಮಾಡಿಕೊಂಡಿದ್ದು, ಕಾನೂನು ಸುವ್ಯವಸ್ಥೆ ಕಾರಣವೊಡ್ಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಜಿಲ್ಲೆಯಲ್ಲಿ ಬೈಕ್ ರ್ಯಾಲಿಗೆ ನಿಷೇಧ ಹೇರಿ ಆದೇಶ ಹೊರಡಿಸಿದ್ದಾರೆ.ರಾಜ್ಯದಲ್ಲಿ ಸುಮಾರು 22 ಮಂದಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಫ್‍ಡಿ ಹಾಗೂ ಪಿಎಫ್‍ಐ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ರಾಜ್ಯ ಬಿಜೆಪಿ ಯುವ ಮೋರ್ಚಾ ಮಂಗಳೂರು ಚಲೋ ಬೈಕ್ ರ್ಯಾಲಿಯನ್ನು ಇಂದಿನಿಂದ ರಾಜ್ಯದ ವಿವಿಧ ಕೇಂದ್ರದಿಂದ ಆಯೋಜಿಸಿತ್ತು. ಮೈಸೂರು ಕೇಂದ್ರವಾಗಿ ಹೊರಡುವ ಬೈಕ್ ರ್ಯಾಲಿ ತಾ. 6 ರಂದು (ಇಂದು) ಮಧ್ಯಾಹ್ನ ಜಿಲ್ಲಾ ಕೇಂದ್ರ ಮಡಿಕೇರಿ ತಲುಪಿ ರಾತ್ರಿ ಸುಳ್ಯದಲ್ಲಿ ತಂಗುವ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಜಿಲ್ಲೆಯಿಂದ ಹೊರಡುವ ಬೈಕ್ ರ್ಯಾಲಿಯ ಪೈಕಿ ಒಂದು ತಂಡ ಕುಶಾಲನಗರದಲ್ಲಿ ಮೈಸೂರಿನಿಂದ ಬರುವ ತಂಡದ ಜೊತೆಗೂಡಿ ಅಲ್ಲಿಂದ 3 ಗಂಟೆಗೆ ಹೊರಡಲಿದೆ. ಮತ್ತೊಂದು ತಂಡ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಬರುವ ತಂಡದೊಂದಿಗೆ ಮೈಸೂರಿನಿಂದ ಬರುವ ರ್ಯಾಲಿಯ ಜೊತೆಗೂಡಿ ಸಂಜೆ ಉಪಾಹಾರ ಮುಗಿಸಿ ತೆರಳುವ ವ್ಯವಸ್ಥೆ ಮಾಡಿಕೊಂಡಿರುವದಾಗಿ ತಿಳಿದು ಬಂದಿದೆ.

ಜಿಲ್ಲೆಯಿಂದ ಸುಮಾರು 700 ಬೈಕ್‍ಗಳಲ್ಲಿ ಯುವ ಮೋರ್ಚಾ ಕಾರ್ಯಕರ್ತರು ತೆರಳುವದಕ್ಕೆ ನೋಂದಾಯಿಸಿಕೊಂಡಿದ್ದಾರೆನ್ನಲಾಗಿದೆ. ಜಿಲ್ಲೆಯಿಂದ ಬೈಕ್ ರ್ಯಾಲಿ ಹೊರಡುವದಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸಂಸದ ಪ್ರತಾಪ್ ಸಿಂಹ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

(ಮೊದಲ ಪುಟದಿಂದ)

ರ್ಯಾಲಿಗೆ ನಿಷೇಧ

ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಮಂಗಳೂರು ಚಲೋ ಬೈಕ್ ರ್ಯಾಲಿಯಿಂದ ಕಾನೂನು ಸುವ್ಯವಸ್ಥೆ ಹದಗೆಡಲಿದೆ ಎಂಬ ಕಾರಣವೊಡ್ಡಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಬೈಕ್ ರ್ಯಾಲಿಯನ್ನು ನಿಷೇಧಿಸಿ ಆದೇಶ ನೀಡಿದ್ದಾರೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲೆಯಲ್ಲಿ ಮೂರು ಕೆ.ಎಸ್.ಆರ್.ಪಿ. ಹಾಗೂ ಮೂರು ಐ.ಆರ್.ಬಿ. ತುಕಡಿಗಳು ಬಂದಿಳಿದಿದ್ದು, ಮಡಿಕೇರಿ ನಗರ, ವೀರಾಜಪೇಟೆ, ಸಿದ್ದಾಪುರ, ಸೋಮವಾರಪೇಟೆ ಹಾಗೂ ಕುಶಾಲನಗರಗಳಲ್ಲಿ ಕರ್ತವ್ಯದಲ್ಲಿ ನಿರತವಾಗಿದೆ. ತಾ. 5 ರಂದು ಮಡಿಕೇರಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಪಥ ಸಂಚಲನ ನಡೆಸಿ ಸಮಾಜದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಯಿತು. ಮಡಿಕೇರಿ ನಗರದಲ್ಲಿ ನಡೆದ ಪಥ ಸಂಚಲನವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭ ಡಿವೈಎಸ್‍ಪಿ ಸುಂದರ್‍ರಾಜ್, ವೃತ್ತ ನಿರೀಕ್ಷಕರಾದ ಪ್ರದೀಪ್ ಕುಮಾರ್, ಮೇದಪ್ಪ ಸೇರಿದಂತೆ ಇತರ ಅಧಿಕಾರಿಗಳಿದ್ದರು.