ಮಡಿಕೇರಿ, ಆ. 23: ಮಡಿಕೇರಿ ಕೋಟೆ ಶ್ರೀ ಗಣಪತಿ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿಯನ್ನು ತಾ. 24 ಮತ್ತು 25 ರಂದು ಆಚರಿಸಲಾಗುವದು.ತಾ. 24 ರಂದು ಗೌರಿ ಪೂಜೆ ನಡೆಯಲಿದ್ದು, ಬೆಳಿಗ್ಗೆ 8.30 ಗಂಟೆಯಿಂದ ಗುರು ಗಣಪತಿ ಪೂಜೆ, ಪುಣ್ಯಾಹಃ, ಸಂಕಲ್ಪ, ಮಹಾಗಣಪತಿ ಹೋಮ, ಪಂಚವಿಂಶತಿ ಸ್ಥಾಪನೆ, ತತ್ಪಕಲಾ ಹೋಮ, ಶಾಂತಿ ಹೋಮ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ತಾ. 25 ರಂದು ಶ್ರೀ ಗಣೇಶ ಚತುರ್ಥಿಯಂದು ಬೆಳಿಗ್ಗೆ 5 ಗಂಟೆಯಿಂದ ದೇವರ ದರ್ಶನಕ್ಕೆ ಅವಕಾಶ ಇರುತ್ತದೆ. ಬೆಳಿಗ್ಗೆ 9 ಗಂಟೆಯಿಂದ ಗಣಹೋಮ ನಡೆಯಲಿದೆ. ಅಂದು ರಾತ್ರಿ 8 ಗಂಟೆಯ ತನಕ ದೇವರ ದರ್ಶನಕ್ಕೆ ಅವಕಾಶ ಇರುತ್ತದೆ ಎಂದು ಶ್ರೀ ಓಂಕಾರೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.

ಸುಂಟಿಕೊಪ್ಪ : ಇಲ್ಲಿಗೆ ಸಮೀಪದ ಶ್ರೀದೇವಿ ಹಾಗೂ ಅಣ್ಣಸ್ವಾಮಿ ದೇವಾಲಯದಲ್ಲಿ ವಿನಾಯಕ ಸೇವಾ ಸಮಿತಿ ವತಿಯಿಂದ 5ನೇ ವರ್ಷದ ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ತಾ.25 ರಂದು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ನಡೆಯಲಿದೆ.

ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ, ವಿಶೇಷ ಪೂಜೆಯೊಂದಿಗೆ ಪ್ರಸಾದ ವಿತರಣೆ ಮಾಡಲಾಗುವದು ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ 6 ಗಂಟೆ ನಂತರ ಗೌರಿ-ಗಣೇಶ ವಿಗ್ರಹ ಮೂರ್ತಿಯನ್ನು ವಿದ್ಯುತ್ ಅಲಂಕೃತ ಭವ್ಯ ಮಂಟಪದಲ್ಲಿ ಮೆರವಣಿಗೆ ಮೂಲಕ ಗದ್ದೆಹಳ್ಳದ ಗಾಂಧಿ ವೃತ್ತದವರೆಗೆ ಕೊಂಡೊಯ್ದು ಶ್ರೀದೇವಿ ಕೆರೆಯಲ್ಲಿ ವಿಸರ್ಜಿಸಲಾಗುವದೆಂದು ಸಮಿತಿ ಅಧ್ಯಕ್ಷ ವಿವೇಕ್ ರೈ ತಿಳಿಸಿದ್ದಾರೆ.

ಸುಂಟಿಕೊಪ್ಪ: ಯಾವದೇ ಧರ್ಮದವರು ಹಬ್ಬ ಹರಿದಿನಗಳನ್ನು ಶಾಂತಿಯುತವಾಗಿ ನಡೆಸಬೇಕು ಎಂದು ಪೊಲೀಸ್ ವೃತ್ತ ನಿರೀಕ್ಷಕ ಕ್ಯಾತೆಗೌಡ ಹೇಳಿದರು.

ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಶ್ರೀ ಗೌರಿ-ಶ್ರೀಗಣೇಶ ಹಾಗೂ ಬಕ್ರಿದ್ ಹಬ್ಬದ ಪ್ರಯುಕ್ತ ಕರೆಯಲಾಗಿದ್ದ ಶಾಂತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಗೌರಿ-ಶ್ರೀಗಣೇಶ ಮೂರ್ತಿ ವಿಸರ್ಜನೋತ್ಸವ ಸಂದರ್ಭದಲ್ಲಿ ಡಿ.ಜೆ.ಸೌಂಡ್ಸ್ ಬಳಸುವಂತಿಲ್ಲ, ಧ್ವನಿವರ್ಧಕವನ್ನು ರಾತ್ರಿ 10 ಗಂಟೆಗೆ ಮುಕ್ತಾಯಗೊಳಿಸಬೇಕೆಂದರು.

ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಂ ಮಾತನಾಡಿ, ಹಬ್ಬವನ್ನು ಶಾಂತಿಯುತವಾಗಿ ಯಾವದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಆಚರಿಸಬೇಕೆಂದರು.

ಸಭೆಯಲ್ಲಿ ಸುಂಟಿಕೊಪ್ಪ ಗ್ರಾ.ಪಂ.ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಕೆದಕಲ್ ಗ್ರಾ.ಪಂ.ಅಧ್ಯಕ್ಷ ಬಾಲಕೃಷ್ಣ ರೈ, ಕೊಡಗರಹಳ್ಳಿ ಗ್ರಾ.ಪಂ. ಅಧ್ಯಕ್ಷ ಅಬ್ಬಾಸ್, ಸುಂಟಿಕೊಪ್ಪ ಗ್ರಾ.ಪಂ.ಮಾಜಿ ಅಧ್ಯಕ್ಷ ಎಂ.ಎ. ಉಸ್ಮಾನ್, ಸುಂಟಿಕೊಪ್ಪ ಗ್ರಾ.ಪಂ. ಸದಸ್ಯರುಗಳಾದ ನಾಗರತ್ನ ಸುರೇಶ್, ರಹೆನಾಫೈರೋಜ್, ಶಿವಮ್ಮ ಮಹೇಶ್, ಎ. ಶ್ರೀಧರ್ ಕುಮಾರ್ ಸುಂಟಿಕೊಪ್ಪ ಮಸೀದಿಗಳ ಪದಾಧಿಕಾರಿಗಳು, ಶ್ರೀ ಗೌರಿ-ಶ್ರೀಗಣೇಶ ಸಮಿತಿ ಸದಸ್ಯರುಗಳು ಪಾಲ್ಗೊಂಡಿದ್ದರು.

ಠಾಣಾಧಿಕಾರಿ ಜಯರಾಂ ಸ್ವಾಗತಿಸಿ, ವಂದಿಸಿದರು.