ಗೋಣಿಕೊಪ್ಪಲು, ಆ. 23: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಪಾಸ್ ರಸ್ತೆಯಲ್ಲಿ ಮದ್ಯದಂಗಡಿಗೆ ಕಟ್ಟಡ ಮಾಲೀಕರು ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಅರ್ವತೋಕ್ಲು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಮದ್ಯದಂಗಡಿಗೆ ಮಳಿಗೆ ನೀಡಿರುವ ಕಟ್ಟಡ ಮಾಲೀಕ ಗಿರಿ ಎಂಬುವವರ ಮನೆಗೆ ತೆರಳಿದ ಗ್ರಾಮಸ್ಥರು ಮದ್ಯದಂಗಡಿಗೆ ಅವಕಾಶ ನೀಡಬಾರದು. ಮದ್ಯದಂಗಡಿ ತೆರೆದು ಒಂದು ವಾರದಲ್ಲಿಯೇ ಸಮೀಪವೇ ಕೊಲೆ ನಡೆದಿದೆ. ಇದರಿಂದ ಈ ಮಾರ್ಗದಲ್ಲಿ ಬರುವವರಿಗೆ ಹಾಗೂ ಇಲ್ಲಿ ಜೀವನ ಸಾಗಿಸುವವರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಮದ್ಯದಂಗಡಿಗೆ ಮಳಿಗೆ ನೀಡಬಾರದು ಎಂದು ಒತ್ತಾಯಿಸಿದರು.

ಈ ಸಂದರ್ಭ ಮಾತನಾಡಿದ ಕಟ್ಟಡ ಮಾಲೀಕ ಗಿರಿ, ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಈಗಾಗಲೇ ಮದ್ಯದಂಗಡಿ ಮಾಲೀಕ ರೊಂದಿಗೆ ಒಪ್ಪಂದ ಪತ್ರ ಆಗಿದೆ. ತೆರವುಗೊಳಿಸಲು ಆಗುವದಿಲ್ಲ. ಅಂಗಡಿ ಮಾಲೀಕರೇ ತೆರವು ಗೊಳಿಸಲು ಮುಂದಾದರೆ ಸಹಕಾರ ನೀಡುವದಾಗಿ ಹೇಳಿದರು.

ಗ್ರಾಮದ ಮಹಿಳೆಯರು ಸೇರಿದಂತೆ ಸ್ತ್ರೀಶಕ್ತಿ ಸಂಘ, ಅನುಗ್ರಹ ಯುವಕ ಸಂಘದ ಸದಸ್ಯರುಗಳು ಪಾಲ್ಗೊಂಡಿದ್ದರು. ಗ್ರಾ ಪಂ ಉಪಾಧ್ಯಕ್ಷೆ ರತ್ನ, ಸದಸ್ಯ ರಾಜೇಶ್ ಉಪಸ್ಥಿತರಿದ್ದರು.