ಮಡಿಕೇರಿ, ಆ. 22: ಸ್ವಾತಂತ್ರ್ಯೋತ್ಸವ ವೇದಿಕೆಯಲ್ಲಿ ಶಾಸಕಿಯ ಕೈ ಮುಟ್ಟಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿರುವ ರಮೇಶ್ ಅವರು ಸ್ವಾತಂತ್ರ್ಯೋತ್ಸವದಂದು ನಡೆದ ಘಟನೆಗೆ ಸಂಬಂಧಿಸಿದಂತೆ ಉಸ್ತುವಾರಿ ಸಚಿವರ ಸೂಚನೆಯಂತೆ ರಾಜೀನಾಮೆ ನೀಡುತ್ತಿದ್ದು, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರದೊಂದಿಗೆ ಸ್ವಾತಂತ್ರ್ಯ ದಿನದಂದು ನಡೆದ ಘಟನೆಯ ಸತ್ಯಾಂಶದ ವರದಿಯನ್ನು ತಾನು ಮುಖ್ಯಮಂತ್ರಿಗಳಿಗೆ ನೀಡಿರುವದಾಗಿ ತಿಳಿಸಿದ್ದಾರೆ.ರಾಜೀನಾಮೆ ಪತ್ರವನ್ನು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಉಸ್ತುವಾರಿ ಸಚಿವ ಸೀತಾರಾಂ ಅವರಿಗೂ ಸಲ್ಲಿಸಿದ್ದು, ದಿನೇಶ್ ಗುಂಡೂರಾವ್ ಅವರಿಗೆ ಸಲ್ಲಿಸಿರುವ ಪತ್ರದಲ್ಲಿ ‘40 ವರ್ಷ ರಾಜಕೀಯ ಜೀವನದಲ್ಲಿ ಸಹೋದರಿಯ ಯೋಗಕ್ಷೇಮ ವಿಚಾರಿಸಿದ್ದು, ಪಕ್ಷದ ದೃಷ್ಟಿಯಲ್ಲಿ ತಪ್ಪೆಂದರೆ ನಮ್ಮಂತ ಹಿರಿಯರು ಬದುಕುವದು ಕಷ್ಟಕರ’ ಎಂದು ರಮೇಶ್ ಉಲ್ಲೇಖಿಸಿದ್ದಾರೆ.

ಹೇಳಿಕೆಗಳನ್ನು ಸ್ಥಗಿತಗೊಳಿಸಲಾಗಿದೆ

ಟಿ.ಪಿ. ರಮೇಶ್ ಅವರ ರಾಜೀನಾಮೆಯಿಂದಾಗಿ ‘ಕೈ’ ಪ್ರಕರಣ ಒಂದು ತಾತ್ವಿಕ ಅಂತ್ಯಕಂಡಿದೆ. ಹಾಗಾಗಿ ಅವರ ಪರ ಹಾಗೂ ವಿರೋಧದ ವೈಯಕ್ತಿಕ ಹೇಳಿಕೆಗಳನ್ನು ಇಲ್ಲಿಗೆ ಸ್ಥಗಿತಗೊಳಿಸಿದ್ದೇವೆ. - ಸಂಪಾದಕ