ಶ್ರೀಮಂಗಲ, 19: ಪೊನ್ನಂಪೇಟೆಯ ಇಗ್ಗುತ್ತಪ್ಪ ಸೌಹಾರ್ಧ ಕ್ರೇಡಿಟ್ ಕೋ-ಅಪರೇಟಿವ್ ನಿಯಮಿತ ಸಂಸ್ಥೆಯು ಸ್ಥಾಪನೆಯಾಗಿ 10 ವರ್ಷ ಪೂರ್ಣಗೊಳಿಸಿದ್ದು, ಸಂಸ್ಥೆಯು 1580 ಸದಸ್ಯರನ್ನು ಹೊಂದಿದ್ದು, 39 ಲಕ್ಷ ಪಾಲು ಬಂಡವಾಳದೊಂದಿಗೆ ರೂ. 10 ಕೋಟಿ 40 ಲಕ್ಷ ಠೇವಣಿ ಹಣ ಹೊಂದಿದೆ. 8 ಕೋಟಿ 92 ಲಕ್ಷ ಹಣವನ್ನು ಸದಸ್ಯರಿಗೆ ಸಾಲವಾಗಿ ನೀಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 12 ಲಕ್ಷದ 78 ಸಾವಿರ ನಿವ್ವಳ ಲಾಭಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷÀ ಮದ್ರೀರ ಗಿಣಿ ಸೋಮಯ್ಯ ತಿಳಿಸಿದರು.

ಪೊನ್ನಂಪೇಟೆಯಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ಆಡಳಿತ ಮಂಡಳಿ ಸಭೆಯಲ್ಲಿ ಈ ವಿಚಾರ ತಿಳಿಸಿದ ಅವರು ಸಂಸ್ಥೆಯು ಕಳೆದೆರಡು ಸಾಲಿನಂತೆಯೇ ಪ್ರಸಕ್ತ ಸಾಲಿನಲ್ಲಿಯೂ ಶೇ. 15 ದರದಲ್ಲಿ ಡಿವಿಡೆಂಡ್ ನೀಡಲಿದೆ. ಮುಂದಿನ 5 ವರ್ಷಗಳಲ್ಲಿಯೂ ಸಹ ಇದೇ ದರಕ್ಕೆ ಕಡಿಮೆಯಾಗದಂತೆ ಡಿವಿಡೆಂಡ್ ನೀಡುವ ಅಭಿಲಾಶೆ ಇರುತ್ತದೆ. ಸದಸ್ಯರೊಬ್ಬರಿಗೆ ರೂ. 30 ಸಾವಿರದವರೆಗೆ ಪಾಲು ಹಣದಲ್ಲಿ ತೊಡಗಿಸಿಕೊಳ್ಳಲು ಅವಕಾಶವಿರುವದ ರಿಂದ ಇತರ ಬ್ಯಾಂಕ್‍ಗಳಲ್ಲಿ ಶೇ. 7, 8 ಬಡ್ಡಿದರದಲ್ಲಿ ಹಣ ತೊಡಗಿಸದೆ ಸಹಕಾರಿಯ ಪಾಲು ಬಂಡವಾಳದಲ್ಲಿ ಹಣ ತೊಡಗಿಸಬಹುದಾಗಿದೆ ಎಂದು ಅವರು ಸಲಹೆ ನೀಡಿದರು.

2007ನೇ ಇಸವಿಯಲ್ಲಿ ಸ್ಥಾಪನೆಯಾದ ಈ ಸಂಸ್ಥೆ ಈಗಾಗಲೇ ಗೋಣಿಕೊಪ್ಪದಲ್ಲಿ ಒಂದು ಶಾಖೆಯನ್ನು ಸ್ಥಾಪಿಸಿದೆ. ವೀರಾಜಪೇಟೆ, ಅಮ್ಮತ್ತಿ ಹಾಗೂ ಕುಶಾಲನಗರಗಳಲ್ಲಿ ಹೊಸ ಶಾಖೆಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ. ಆದರೆ, ಸೂಕ್ತ ಸ್ಥಳ ದೊರೆಯದ ಕಾರಣ ಶಾಖೆ ತೆರೆಯುವ ಯೋಜನೆಗೆ ವಿಳಂಬವಾಗಿದೆ ಎಂದು ಹೇಳಿದರು.

ಸಂಸ್ಥೆಯಲ್ಲಿ ಸಾಲ ಪಡೆದು ಅಭಿವೃದ್ಧಿಯಾಗಲು ಪ್ರೋತ್ಸಾಹಿಸಲು ಸಾಲ ಪಡೆದ ಸದಸ್ಯರು ಅವಧಿ ಮುಗಿಯುವ ಮುನ್ನವೇ ಆಕಸ್ಮಿಕ ಮರಣ ಹೊಂದಿದರೆ, ಅವರ ಕುಟುಂಬ ವರ್ಗಕ್ಕೆ ಅಥವಾ ಸಾಲದ ಜಾಮೀನುದಾರರಿಗೆ ಸಹಾಯ ನೀಡುವ ಉದ್ದೇಶದಿಂದ ‘ಸಾಲಗಾರರ ಕ್ಷೇಮಾಭಿವೃದ್ಧಿ ನಿಧಿ’ ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. ಸದ್ಯಕ್ಕೆ ಈ ನಿಧಿಯಿಂದ ಬಂಡವಾಳಕ್ಕನು ಗುಣವಾಗಿ ರೂ. 15 ಸಾವಿರದಿಂದ 60 ಸಾವಿರದವರೆಗೆ ಸಹಾಯಧನ ನೀಡಿ ಸಾಲ ಚುಕ್ತಮಾಡಲು ಸಹಕಾರ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ಸಹಾಯ ನಿಧಿಯನ್ನು ರೂ. 1 ಲಕ್ಷಕ್ಕೆ ಏರಿಕೆ ಮಾಡಬೇಕೆಂಬ ಅಭಿಪ್ರಾಯವಿದೆ. ಇದು ಮಹಾಸಭೆಯಲ್ಲಿ ಅಂಗೀಕಾರವಾದರೆ ಈ ಸೌಲಭ್ಯವನ್ನು ಸದಸ್ಯರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಸಂಘದಲ್ಲಿ 50 ರಿಂದ 60 ವರ್ಷ ವಯಸ್ಸಿಗೊಳಪಟ್ಟ ಸದಸ್ಯರು ರೂ. 30 ಸಾವಿರ ಮರಣ ನಿಧಿವಂತಿಕೆಯನ್ನು ಪಾವತಿಸಿದರೆ, ನಿಯಮಾನುಸಾರ ರೂ.1 ಲಕ್ಷಗಳ ಮರಣ ನಿಧಿ ಸೌಲಭ್ಯ ನೀಡಲು ತಾರೀಕು 1.4.2017ರಿಂದ ಜಾರಿಗೆ ಬಂದಿರುತ್ತದೆ. ಈ ಸೌಲಭ್ಯಕ್ಕೆ ‘ಸಹಕಾರಿ ಜೀವ ನಿಧಿ’ಯೆಂದು ಕರೆಯಲಾಗುತ್ತದೆ. ಇದಲ್ಲದೆ, 50 ವರ್ಷದ ಒಳಪಟ್ಟವರಿಗೆ 10 ಸಾವಿರ ಮರಣ ನಿಧಿವಂತಿಕೆಯನ್ನು ಪಾವತಿಸಿದರೆ 1 ಲಕ್ಷ ಮರಣ ನಿಧಿ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ. ಸಾಮಾನ್ಯ ಮರಣ ನಿಧಿ ರೂ. 1 ಸಾವಿರ ಪಾವತಿಸಿದರೆ 10 ಸಾವಿರ ಮರಣ ನಿಧಿಯ ಸೌಲಭ್ಯ ಸಂಘದಲ್ಲಿ ನೀಡಲಾಗುವದೆಂದು ಸಭೆಯಲ್ಲಿ ಮಾಹಿತಿ ನೀಡಿದರು.

ಮಹಾಸಭೆ: ಸಂಘದ ವಾರ್ಷಿಕ ಮಹಾಸಭೆ ತಾ. 22 ರಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಪೂರ್ವಾಹ್ನ 11 ಗಂಟೆಗೆ ಸಂಘದ ಅಧ್ಯಕ್ಷ ಮದ್ರೀರ ಗಿಣಿ ಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಸಭೆಯಲ್ಲಿ ಉಪಾಧ್ಯಕ್ಷರುಗಳಾದ ಕಡೇಮಾಡ ಮಣಿ ಭೀಮಯ್ಯ, ಖಜಾಂಚಿ ಚಿರಿಯಪಂಡ ಕೆ.ಕಾಶಿಯಪ್ಪ, ಗೌರವ ಕಾರ್ಯದರ್ಶಿ ಅರಮಣಮಾಡ ಮಿಟ್ಟು ಬೋಪಯ್ಯ, ನಿರ್ದೇಶಕರು ಗಳಾದ ಅಲೇಮಾಡ ಎ.ಶ್ರೀನಿವಾಸ್, ಕೋದೆಂಗಡ ಎಸ್.ಸುರೇಶ್, ಕಳ್ಳಿಚಂಡ ಜಿ.ಡಾಲಿ ಕುಶಾಲಪ್ಪ, ಐನಂಡ ಕೆ. ಮಂದಣ್ಣ ಕೂಕಂಡ ಎನ್. ಕಾವೇರಪ್ಪ, ಕಬ್ಬಚ್ಚೀರ ಎಂ.ಚಿದಂಬರ, ಮುದ್ದಿಯಡ ಪಿ. ಪ್ರಕಾಶ್, ಮಾಣಿಯಪಂಡ ಜೆ.ಪಾರ್ವತಿ, ನೆಲ್ಲೀರ ಡಾ. ನಿಖಿತ ಸಚಿನ್, ಕುಲ್ಲಚಂಡ ಪ್ರಭು ನಂಜಪ್ಪ, ಹಾಗೂ ಕಳ್ಳಿಚಂಡ ಕಟ್ಟಿ ಪೂಣಚ್ಚ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮದ್ರೀರ ಎಸ್. ಗಣಪತಿ ಹಾಜರಿದ್ದರು.