ಮಡಿಕೇರಿ, ಜು. 12: ಮಡಿಕೇರಿಯ ಸಂತ ಜೋಸೆಫರ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಒಕ್ಕೂಟದ ಸಭೆ ಶಾಲೆಯ ಸಭಾಂಗಣದಲ್ಲಿ ನೆರವೇರಿತು. ಈ ಬಾರಿ ಹಳೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಇದೇ ಸಂದರ್ಭ ಪ್ರಸಕ್ತ ಸಾಲಿನಲ್ಲಿ ವಿವಿಧ ವಿಷಯಗಳಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಬಹುಮಾನಗಳನ್ನೂ, ಪ್ರಶಸ್ತಿ ಪತ್ರಗಳನ್ನೂ ನೀಡಲಾಯಿತು.

ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಅರುಳಮ್ಮ ಹಾಗೂ ಹಳೇ ವಿದ್ಯಾರ್ಥಿ ಸಂಘದ ಸದಸ್ಯರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ತದನಂತರ ವಿದ್ಯಾರ್ಥಿ ಸಂಘದ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಓದಿ, ಸಭೆಯ ಒಪ್ಪಿಗೆ ಪಡೆಯಲಾಯಿತು ಎಂದು ಸಂಘದ ಅಧ್ಯಕ್ಷರಾದ ಸಿ. ಕಾವೇರಿ ಪೂವಯ್ಯ ತಿಳಿಸಿದ್ದಾರೆ.