ಮಡಿಕೇರಿ, ಜು. 7: ಸ್ವಸಹಾಯ ಸಂಘಗಳಿಂದ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ನಡೆಸಲು ಸಾಧ್ಯವಾಗಿದ್ದು, ಮುಂದೆಯೂ ಸಂಘದ ಚಟುವಟಿಕೆಗಳನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಹೆಚ್. ಮಂಜುನಾಥ್ ಹೇಳಿದರು.ಪ್ರಗತಿಬಂಧು ಸ್ವಸಹಾಯ ಸಂಘ ಹಾಗೂ ಐಡಿಬಿಐ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಸಂಘದ ಸದಸ್ಯರುಗಳಿಗೆ ಲಾಂಭಾಂಶ ಹಂಚಿಕೆ ಸಮಾರಂಭದಲ್ಲಿ ಸದಸ್ಯರಿಗೆ ಲಾಭಾಂಶ ಹಂಚಿಕೆಯನ್ನು ಔಪಚಾರಿಕವಾಗಿ ಬಿಡುಗಡೆ ಮಾಡಿ ಮಾತನಾಡಿದರು. ಹಿಂದೆ ಮಹಿಳೆಯರು ಆರ್ಥಿಕವಾಗಿ ಹಿಂದುಳಿದಿದ್ದರು. ಪ್ರತಿಯೊಂದಕ್ಕೂ ಪುರುಷನನ್ನು ಅವಲಂಬಿಸಬೇಕಾದ ಸನ್ನಿವೇಶ ಇತ್ತು. ಇಂತಹ ಸಂದರ್ಭದಲ್ಲಿಯೇ ಸ್ವ ಸಹಾಯ ಸಂಘಗಳನ್ನು ಸ್ಥಾಪಿಸುವ ಮೂಲಕ ಧರ್ಮಸ್ಥಳದ ಡಾ.ಡಿ ವಿರೇಂದ್ರ ಹೆಗಡೆ ಮಹಿಳೆಯರನ್ನು ಆರ್ಥಿಕವಾಗಿ ಮುಂಚೂಣಿಗೆ ತಂದಿದ್ದಾರೆ.

ಇಂದು ರಾಜ್ಯದಲ್ಲಿ ಮೂರು ಲಕ್ಷದ ಎಪ್ಪತ್ತು ಸಾವಿರ ಸ್ವಸಹಾಯ ಸಂಘವಿದ್ದು, 37 ಲಕ್ಷ ಸದಸ್ಯರಿದ್ದಾರೆ. ಸಂಘದಿಂದ ಮಹಿಳೆಯರಲ್ಲಿ ಸ್ವಾಭಿಮಾನ ಬೆಳೆದಿದ್ದು, ಸಂಘ ದೇಶದಲ್ಲಿ ಎಲ್ಲರಿಗೂ ಮಾದರಿಯಾಗಿದೆ. ಯುವ ಪೀಳಿಗೆಯನ್ನು ಸಂಘದೊಂದಿಗೆ ಸೇರಿಸಿಕೊಂಡು ಸಂಘವನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸುವಂತೆ ಸದಸ್ಯರಿಗೆ ಇದೇ ಸಂದರ್ಭ ಕಿವಿಮಾತು ಹೇಳಿದರು.

ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, ಸಂಘದಿಂದಲೇ ಮಹಿಳೆಯರು ಇಂದು ಒಗ್ಗಟ್ಟಾಗಿ ದುಡಿದು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಆಗಿದೆ ಎಂದು ಅಭಿಪ್ರಾಯ ಪಟ್ಟರು.

ಮಡಿಕೇರಿ ಐಡಿಬಿಐ ಬ್ಯಾಂಕ್ ಪ್ರಬಂಧಕ ಕೆ. ಮುರುಳಿ ಕೃಷ್ಣ ಮಾತನಾಡಿ, ಇಂತಹ ಸಂಘ ಸಂಸ್ಥೆಗಳೊಂದಿಗೆ ಬ್ಯಾಂಕ್‍ಗಳು ಕೈಜೋಡಿಸುವ ಅಗತ್ಯವಿದೆ. ಪ್ರತಿಯೊಬ್ಬರು ಒಂದುಗೂಡುವÀ ಮೂಲಕ ಹೆಚ್ಚಿನ ಅಭಿವೃದ್ಧಿ ಸಾಧಿಸಬೇಕಿದೆ. ಸಂಘ ಎಲ್ಲರನ್ನು ಒಟ್ಟುಗೂಡಿಸಿ ಉತ್ತಮ ವೇದಿಕೆ ಕಲ್ಪಿಸಿರುವದು ಉತ್ತಮ ಬೆಳವಣಿಗೆ ಎಂದರು.

ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಾನಂಗಡ ಅರುಣ್ ಕುಮಾರ್ ಮಾತನಾಡಿದರು. ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಎಸ್ ಸೀತಾರಾಮ್ ಶೆಟ್ಟಿ ಮತ್ತಿತರರು ಇದ್ದರು.

ಮೇಕೇರಿ ಸುಬ್ರಮಣ್ಯ ಸ್ವಸಹಾಯ ಸಂಘದ ಜಯಂತಿ ಪ್ರಾರ್ಥಿಸಿ, ವೀರಾಜಪೇಟೆ ತಾಲೂಕು ಯೋಜನಾಧಿಕಾರಿ ಸದಾಶಿವಗೌಡ ಸ್ವಾಗತಿಸಿದರು. ಮಡಿಕೇರಿ ವಲಯ ಮೇಲ್ವಿಚಾರಕ ಮುಕುಂದ ವಂದಿಸಿ, ಭಾಗಮಂಡಲ ವಲಯದ ಮೇಲ್ವಿಚಾರಕ ಚೇತನ್ ಕಾರ್ಯಕ್ರಮ ನಿರೂಪಿಸಿದರು.