ಗೋಣಿಕೊಪ್ಪಲು, ಜು. 7: ಯೋಗದೊಂದಿಗೆ ಪರಿಸರ ಕಾಳಜಿ ಮೂಡಿಸುವ ಪ್ರಯತ್ನಕ್ಕೆ ಯೋಗ ಪಟುಗಳು ಮುಂದಾಗಬೇಕು ಎಂದು ಪರಿಸರ ಪ್ರೇಮಿ ಕಿರಿಯಮಾಡ ದಿಲನ್ ಮಂದಣ್ಣ ಅಭಿಪ್ರಾಯಪಟ್ಟರು.

ಇಲ್ಲಿನ ಸೌಖ್ಯ ಹಾಲ್‍ನಲ್ಲಿ ಆರ್ಟ್ ಆಫ್ ಲಿವಿಂಗ್ ವತಿಯಿಂದ ನಡೆಯುತ್ತಿರುವ ಯೋಗ ತರಬೇತಿ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ಯೋಗ ಮೈಗೂಡಲು ಸಾಧ್ಯ. ಪ್ರಕೃತಿಯಲ್ಲಿ ಮನಸ್ಸಿಗೆ ಮುದ ನೀಡುವದರಿಂದ ಜೀವರಾಶಿಗಳ ಸಂರಕ್ಷಣೆ ಅಗತ್ಯವಾಗಿದೆ. ಯೋಗದೊಂದಿಗೆ ಪರಿಸರ ಕಾಳಜಿ ಮೂಡಿಸುವ ಪ್ರಯತ್ನಕ್ಕೆ ಯೋಗ ಪಟುಗಳು ಮುಂದಾಗಬೇಕು ಎಂದರು.

ಶಿಬಿರ ತರಬೇತುದಾರ ಅಳಮೇಂಗಡ ಡಾನ್ ರಾಜಪ್ಪ ಮಾತನಾಡಿ, ಯೋಗ ತರಬೇತಿಯು 10 ಗಂಟೆಗಳ ಕಾಲ ಮಿತಿಯಲ್ಲಿ 5 ದಿನಗಳ ಕಾಲ ನೀಡಲಾಗುತ್ತಿದೆ. ಪುರಾತನ ಜ್ಞಾನ ದೀವಿಗೆಯಿಂದ ಆಯ್ದ ಈ ಯೋಗವು ಆರೋಗ್ಯಪೂರ್ಣ, ಆನಂದದಾಯಕ ಹಾಗೂ ಶಾಂತಚಿತ್ತ ಬದುಕು ನೀಡುತ್ತದೆ ಎಂದರು.

ಶಿಬಿರವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ. ಬೋಪಣ್ಣ ಉದ್ಘಾಟಿಸಿದರು. ಈ ಸಂದರ್ಭ ಸೌಖ್ಯ ಹಾಲ್‍ನ ರೋಶಿಕಾ ಬೆಳ್ಯಪ್ಪ ಉಪಸ್ಥಿತರಿದ್ದರು. ಸುಮಾರು 100 ಮಂದಿ ತರಬೇತಿಯಲ್ಲಿ ಪಾಲ್ಗೊಂಡರು.