ಗೋಣಿಕೊಪ್ಪಲು, ಜು. 7: ಇಲ್ಲಿನ ಬೈಪಾಸ್‍ನಲ್ಲಿ ತೆರೆಯಲು ಉದ್ದೇಶಿಸಿರುವ ಮದ್ಯದಂಗಡಿಗಳಿಗೆ ಅಬಕಾರಿ ಇಲಾಖೆ ಅನುಮತಿ ನೀಡಬಾರದು ಎಂದು ಬೈಪಾಸ್ ರಸ್ತೆಗೆ ಹೊಂದಿಕೊಂಡಂತಿರುವ ಕಾವೇರಿ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿ ಒತ್ತಾಯಿಸಿದರು.ಬೈಪಾಸ್ ರಸ್ತೆ ಮೂಲಕ ಮೆರವಣಿಗೆ ಮೂಲಕ ಆಗಮಿಸಿದ ಸುಮಾರು 150 ಕ್ಕೂ ಹೆಚ್ಚು ನಿವಾಸಿಗಳು ಗೋಣಿಕೊಪ್ಪ-ಪೊನ್ನಂಪೇಟೆ ರಸ್ತೆಯಲ್ಲಿ ರಸ್ತೆ ತಡೆ ನಡೆಸಲಾಯಿತು. ನಂತರ ಬಸ್ ನಿಲ್ದಾಣದ ಎದುರು ಮಾನವ ಸರಪಳಿ ನಿರ್ಮಿಸಿ ಮದ್ಯದಂಗಡಿ ತೆರೆಯುವ ಬಗ್ಗೆ ವಿರೋಧ ವ್ಯಕ್ತಪಡಿಸಿದರು.

ಬೈಪಾಸ್ ರಸ್ತೆಗೆ ಹೊಂದಿ ಕೊಂಡಂತಿರುವ ಕಾವೇರಿ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿ ಯಾವ ಕಾರಣಕ್ಕೂ ಮದ್ಯದಂಗಡಿಗಳನ್ನು ಬೈಪಾಸ್ ರಸ್ತೆಯಲ್ಲಿ ತೆರೆಯಲು ಅವಕಾಶ ನೀಡಬಾರದು. ಈಗಾಗಲೇ ಮದ್ಯದಂಗಡಿಗಳನ್ನು aಹೆದ್ದಾರಿಗಳಿಂದ ತೆರವುಗೊಳಿಸಲು ಸುಪ್ರಿಂಕೋರ್ಟ್ ಸೂಚಿಸಿರುವ ನಿಯಮದಂತೆ ಬೈಪಾಸ್‍ಗೆ ಸುಮಾರು 8 ಮದ್ಯ ದಂಗಡಿಗಳು ಸ್ಥಳಾಂತರಗೊಳ್ಳಲಿ ರುವದು ಸರಿಯಲ್ಲ. ವಸತಿ ನಿಬಿಡ ಪ್ರದೇಶವಾದ ಈ ಬಡಾವಣೆಗೆ ಹೊಂದಿಕೊಂಡಂತಿರುವ ರಸ್ತೆಯಲ್ಲಿ ಯಾವ ಕಾರಣಕ್ಕೂ ಮದ್ಯದಂಗಡಿ ತೆರೆಯಲು ಅವಕಾಶ ನೀಡುವದಿಲ್ಲ ಎಂದು ಪಟ್ಟು ಹಿಡಿದರು.

ಸ್ಥಳಕ್ಕೆ ಆಗಮಿಸಿದ ಅಬಕಾರಿ ಉಪ ನಿರೀಕ್ಷಕ ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿ, ಅನುಮತಿ ನೀಡದೇ ಇರುವ ಬಗ್ಗೆ ಲಿಖಿತ ಹೇಳಿಕೆ ನೀಡುವಂತೆ ಒತ್ತಾಯಿಸಲಾಯಿತು. ಇದರಂತೆ ಅಬಕಾರಿ ಇಲಾಖೆ ಅಧಿಕಾರಿಗಳು ಅನುಮತಿ ನೀಡುವ ಸಂದರ್ಭ ಬಡಾವಣೆ ನಿವಾಸಿಗಳ ಅಭಿಪ್ರಾಯವನ್ನು ಕೋರಲಾಗುವದು ಎಂದು ಲಿಖಿತ ಹೇಳಿಕೆ ನೀಡಿದರು.

ಗ್ರಾಮ ಪಂಚಾಯಿತಿಗೂ ಮನವಿ ಸಲ್ಲಿಸಿ ಮದ್ಯದಂಗಡಿ ತೆರೆಯಲು ನಿರಾಪೇಕ್ಷಣಾ ಪತ್ರ ನೀಡದಂತೆ ಒತ್ತಾಯಿಸಲಾಯಿತು.

ಈ ಸಂದರ್ಭ ಕಾವೇರಿ ಒಕ್ಕೂಟದ ಸಂಚಾಲಕ ಸಣ್ಣುವಂಡ ರಜನ್ ತಿಮ್ಮಯ್ಯ ಮಾತನಾಡಿ, ಈ ಬಗ್ಗೆ ಅಬಕಾರಿ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಬೈಪಾಸ್ ರಸ್ತೆಯಲ್ಲಿ ಮದ್ಯದಂಗಡಿ ತೆರಯಲು ಅವಕಾಶ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದೆವು. ಸ್ಥಳ ಮಹಜರು ನಡೆಸಿ ಅನುಮತಿ ನಿರಾಕರಣೆ ಮಾಡುವಂತೆ ನಾವು ಸಲ್ಲಿಸಿದ್ದ ಮನವಿಗೆ ಯಾವದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದಾಗಿ ನಾವು ಪ್ರತಿಭಟನೆ ನಡೆಸು ವಂತಾಗಿದೆ. ಜನನಿಬಿಡ ಪ್ರದೇಶದಲ್ಲಿ ಮದ್ಯ ದಂಗಡಿಗೆ ಅನುಮತಿ ಸರ್ಕಾರ ನೀಡಬಾರದು ಎಂದರು.

ಪ್ರತಿಭಟನೆಯಲ್ಲಿ ಕಾವೇರಿ ಒಕ್ಕೂಟ ಅಧ್ಯಕ್ಷ ಸುಳ್ಳಿಮಾಡ ನಾಚಪ್ಪ, ಉಪಾಧ್ಯಕ್ಷ ಮದನ್ ಶೆಟ್ಟಿ, ಖಜಾಂಚಿ ರಶೀದ್, ಪದಾಧಿಕಾರಿಗಳಾದ ಸುಮಿತ ಅಪ್ಪಣ್ಣ, ಹೇಮಾವತಿ, ರಂಜಿ ನಂಜಪ್ಪ ಪಾಲ್ಗೊಂಡಿದ್ದರು.