ಮಡಿಕೇರಿ, ಜು. 7: ಒಂದೆಡೆ ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದ ತನಕ ಸಮ್ಮೇಳನಗಳನ್ನು ಆಯೋಜಿಸಿ, ನಾಡು, ನುಡಿ, ಸಂಸ್ಕøತಿಯೊಂದಿಗೆ ಭಾಷೆಯ ಬೆಳವಣಿಗೆಗಾಗಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವಂತೆ ಸರಕಾರವನ್ನು ಒತ್ತಾಯಿಸಲಾಗುತ್ತಿದೆ. ಹೀಗಿದ್ದು, ಗ್ರಾಮೀಣ ಶಾಲೆಗಳೊಂದಿಗೆ ನಗರ ಪ್ರದೇಶಕ್ಕೆ ಹೊಂದಿಕೊಂಡಿರುವ ಸರಕಾರಿ ಶಾಲೆಗಳು ಕೂಡ ಒಂದೊಂದಾಗಿ ಬಾಗಿಲು ಮುಚ್ಚಿಕೊಳ್ಳುತ್ತಿವೆ.ಮೂರು ದಶಕಗಳ ಹಿಂದೆ ಇಲ್ಲಿನ ಭಗವತಿ ನಗರದಲ್ಲಿ ಸ್ಥಳೀಯರ ಬೇಡಿಕೆಯಂತೆ ಪ್ರಾರಂಭಗೊಂಡಿದ್ದ ಸರಕಾರಿ ಕಿರಿಯ ಕನ್ನಡ ಪ್ರಾಥಮಿಕ ಶಾಲೆ ಮುಚ್ಚಿ ಹೋಗಿದೆ. 2009- 2010ನೇ ಸಾಲಿನಲ್ಲಿ ಈ ಶಾಲೆಯಲ್ಲಿ ಅಂದಾಜು ರೂ. 4 ಲಕ್ಷ ವೆಚ್ಚದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಿಸಲಾಗಿದೆ.
ಹೀಗಿದ್ದು, ಇಂದು ಶಾಲೆ ಮುಚ್ಚಲ್ಪಟ್ಟು, ಕೇವಲ ನಾಲ್ಕಾರು ವರ್ಷಗಳ ಹಿಂದೆ ನಿರ್ಮಿಸಿರುವ ಕಟ್ಟಡ ಕೂಡ ಪಾಳು ಬಿದ್ದಿದೆ. ಭಗವತಿ ನಗರ ಸೇರಿದಂತೆ ಗ್ರಾಮೀಣ ಭಾಗದ ದೇವಸ್ತೂರು, ವಣಚಲು, ಹಮ್ಮಿಯಾಲ ಮುಂತಾದೆಡೆ ಶಾಲಾ ಕಟ್ಟಡಗಳು ಶೈಕ್ಷಣಿಕ ಚಟುವಟಿಕೆಯಿಲ್ಲದೆ ಮತ್ತು ನಿರ್ವಹಣೆಯಿಲ್ಲದೆ ಗಾಳಿ ಮಳೆಯಿಂದ ಕುಸಿದು ಬೀಳುತ್ತಿರುವ ದೃಶ್ಯ ಗೋಚರಿಸಿದೆ.
ವಿದ್ಯಾದೇಗುಲಗಳು ಬಾಗಿಲು ಮುಚ್ಚಿಕೊಂಡು ಕಣ್ಣೆದುರೇ ಬೀಳುತ್ತಿರುವ ದೃಶ್ಯ ಮನಸ್ಸಿಗೆ ನೋವುಂಟು ಮಾಡುವಂತಾಗಿದೆ ಎಂದು ಆಯಾ ಗ್ರಾಮದ ಹಿರಿಯರಾದ ಎಂ.ಬಿ. ಪೊನ್ನಪ್ಪ, ಕಾಕೇರ ಪೊನ್ನಪ್ಪ ಮೊದಲಾದವರು ‘ಶಕ್ತಿ’ಯೊಂದಿಗೆ ಬೇಸರ ಹೊರಗೆಡವಿದ್ದಾರೆ. ಇಂತಹ ಶಾಲೆಯ ಕಟ್ಟಡಗಳನ್ನು ಗ್ರಾಮದ ಸಂಘ ಸಂಸ್ಥೆಗಳ ನಿರ್ವಹಣೆಗೆ ಒದಗಿಸಿ ಸೇವಾ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲು ಒತ್ತಾಯಿಸಿದ್ದಾರೆ.
- ಚಿತ್ರ, ವರದಿ : ಟಿ.ಜಿ. ಸತೀಶ್