ಮಡಿಕೇರಿ, ಜೂ. 22 :ಕುಶಾಲನಗರದ ಗುಂಡೂರಾವ್ ಬಡಾವಣೆಯ ನಿವೇಶನಗಳನ್ನು ಕಾನೂನು ಬಾಹಿರವಾಗಿ ಹರಾಜು ಹಾಕಲಾಗಿದೆ ಎಂದು ಆರೋಪಿಸಿರುವ ಸ್ಥಳೀಯ ವಕೀಲ ಆರ್.ಕೆ. ನಾಗೇಂದ್ರಬಾಬು, ಜಿಲ್ಲಾಧಿಕಾರಿಗಳು ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸ ಬೇಕೆಂದು ಒತ್ತಾಯಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಿಯಮ ಉಲ್ಲಂಘಿಸಿ ಹರಾಜು ಪ್ರಕ್ರಿಯೆ ನಡೆಸುವ ಮೂಲಕ ಶ್ರೀಮಂತರಿಗೆ ಅನುಕೂಲ ಕಲ್ಪಿಸಲಾಗಿದ್ದು, ಬಡವರಿಗೆಂದು ಮೀಸಲಿಟ್ಟಿದ್ದ ಜಾಗವನ್ನು ಕಸಿದು ಕೊಂಡಂತಾಗಿದೆ ಎಂದು ಆರೋಪಿಸಿದರು. ಆರ್. ಗುಂಡೂರಾವ್ ಅವರು ಮುಖ್ಯಮಂತ್ರಿ ಗಳಾಗಿದ್ದ ಸಂದರ್ಭ ಕುಶಾಲನಗರದ ಬಡವರ್ಗದ ಮಂದಿಗೆ ನಿವೇಶನವನ್ನು ಹಂಚುವ ಸಲುವಾಗಿ ಸಣ್ಣ ಹಾಗೂ ಮಧ್ಯಮ ನಗರಗಳ ಸಮಗ್ರಾಭಿವೃದ್ಧಿ ಯೋಜನೆಯಡಿ ಕೇಂದ್ರ ಸರಕಾರದ ಮೂಲಕ 80 ಲಕ್ಷ ರೂ. ಸಾಲವನ್ನು ಪಡೆದು ಜಮೀನನ್ನು ಖರೀದಿಸಲಾಗಿತ್ತು.

ಗುಂಡೂರಾವ್ ಅವರ ಪರಿಕಲ್ಪನೆಯಂತೆ ಈ ಜಮೀನು ನಿವೇಶನಗಳಾಗಿ ಬಡವರಿಗೆ ಹಂಚಿಕೆಯಾಗಬೇಕಾಗಿತ್ತು. ಆದರೆ ನಿವೇಶನಕ್ಕಾಗಿ ಪಟ್ಟಣ ಪಂಚಾಯಿತಿಗೆ ಬಡವರಿಂದ ಸಲ್ಲಿಕೆಯಾಗಿರುವ ಸುಮಾರು 800 ಅರ್ಜಿಗಳನ್ನು ಗಣನೆಗೆ ತೆಗೆದುಕೊಳ್ಳದ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಐಡಿಎಸ್‍ಎಂಟಿ ಸಮಿತಿ ಹರಾಜು ನಡೆಸಲು ಅವಕಾಶ ನೀಡಿದೆ. ಈ ನಿಯಮ ಬಾಹಿರ ಹರಾಜು ಪ್ರಕ್ರಿಯೆಯಿಂದ ಬಡವರಿಗೆ ಮಾತ್ರವಲ್ಲದೆ ಸರಕಾರದ ಬೊಕ್ಕಸಕ್ಕೆ ಸುಮಾರು 2 ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ ಎಂದು ಆರೋಪಿಸಿದರು.

ಹರಾಜಿನ ಮೂಲಕ ಸುಮಾರು 51 ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು, ಇವುಗಳಲ್ಲಿ ಬಹುತೇಕ ನಿವೇಶನಗಳು ಧನಿಕರ ಪಾಲಾಗಿದೆ. ಅರ್ಜಿ ಸಲ್ಲಿಸಿರುವ ಬಡವರಲ್ಲಿ 51 ಅರ್ಹ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿ ನಿವೇಶನ ವನ್ನು ಹಂಚಿಕೆ ಮಾಡಬಹುದಾಗಿತ್ತು ಎಂದು ಹೇಳಿದರು.

ಸಾಲ ತೀರಿಸುವದಕ್ಕಾಗಿ ಬಡವರ್ಗಕ್ಕೆ ಮೀಸಲಿಟ್ಟಿದ್ದ ನಿವೇಶನಗಳನ್ನು ಧನಿಕರಿಗೆ ಹರಾಜು ಹಾಕುವ ಅಗತ್ಯವಿತ್ತೇ ಎಂದು ಪ್ರಶ್ನಿಸಿದ ಅವರು ಜಿಲ್ಲಾಧಿಕಾರಿಗಳು ಈಗ ನಡೆದಿರುವ ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸದಿದ್ದಲ್ಲಿ ಕಾನೂನು ಹೋರಾಟ ನಡೆಸಿ ಬಡವರಿಗೆ ನ್ಯಾಯ ದೊರಕಿಸಿ ಕೊಡುವದಾಗಿ ತಿಳಿಸಿದರು.

ಪಟ್ಟಣ ಪಂಚಾಯಿತಿಗೆ ಅಂತಹ ಅನಿವಾರ್ಯತೆ ಇದ್ದಿದ್ದರೆ ಬಡವರಿಗೆ ಹಾಗೂ ಶ್ರೀಮಂತರಿಗೆ ಪ್ರತ್ಯೇಕವಾಗಿ ಲೇಔಟ್‍ಗಳನ್ನು ನಿರ್ಮಿಸಿಕೊಡ ಬಹುದಾಗಿತ್ತು. ಆದರೆ ದೂರದೃಷ್ಟಿತ್ವ ಇಲ್ಲದ ಪ.ಪಂ ಬಡವರಿಗೆ ಸೂರು ಕಲ್ಪಿಸುವದಕ್ಕಾಗಿ ಮೀಸಲಿಟ್ಟಿದ್ದ ನಿವೇಶನವನ್ನು ಆದಾಯದ ಮೂಲವನ್ನಾಗಿ ಮಾಡಿಕೊಂಡಿದ್ದು ವಿಷಾದಕರ ವೆಂದರು.

ತಾನು ಹೆಸರಿಗೆ ಮಾತ್ರ ಪ.ಪಂ.ಗೆ ವಕೀಲನಾಗಿದ್ದು, ಪ.ಪಂ.ನ ಅನುಕೂಲದ ಕಾರ್ಯಗಳಿಗನುಗುಣ ವಾಗಿ 5-6 ವಕೀಲರುಗಳನ್ನು ಪ.ಪಂ. ನೇಮಿಸಿಕೊಂಡಿದೆ. ನಿವೇಶನದ ಹರಾಜಿಗೆ ಸಂಬಂಧಿಸಿದಂತೆ ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ಗಮನ ಸೆಳೆದಿದ್ದರೂ ಸ್ಪಂದನೆ ನೀಡದ ಪ.ಪಂ. ಇಲ್ಲಿಯವರೆಗೆ ತನ್ನ ಬಳಿ ಯಾವದೇ ಅಭಿಪ್ರಾಯವನ್ನು ಬಯಸಲಿಲ್ಲವೆಂದು ನಾಗೇಂದ್ರ ಬಾಬು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕ್ಷೇಮ ಕುಶಾಲನಗರಕ್ಕಾಗಿ ನಾನು ಸಮಿತಿಯ ಸಂಚಾಲಕ ಕೆ.ಎಸ್.ನಾಗೇಶ್ ಉಪಸ್ಥಿತರಿದ್ದರು.