ಬೆಂಗಳೂರು, ಜೂ. 21: ಪ್ರತಿಪಕ್ಷಗಳ ಒತ್ತಾಯಕ್ಕೆ ಮಣಿದಿರುವ ರಾಜ್ಯ ಸರ್ಕಾರ ಕೊನೆಗೂ ರೈತರ ಸಾಲ ಮನ್ನಾ ಮಾಡುವದಾಗಿ ಘೋಷಿಸಿದೆ. ಸಹಕಾರಿ ಬ್ಯಾಂಕ್‍ಗಳಲ್ಲಿನ 50 ಸಾವಿರ ರೂ. ವರೆಗಿನ ರೈತರ ಸಾಲ ಮನ್ನಾ ಮಾಡುವದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಜೂನ್ 20ರವರೆಗೆ ಬಾಕಿ ಇರುವ ಪ್ರತಿ ರೈತರ ಸಾಲದ ಪ್ರಮಾಣದಲ್ಲಿ ರೂ. 50 ಸಾವಿರದಷ್ಟು ಮನ್ನಾ ಮಾಡುವದಾಗಿ ಅವರು ತಿಳಿಸಿದ್ದಾರೆ. ಸಾಲಮನ್ನಾದಿಂದ 22,27,506 ರಾಜ್ಯದ ರೈತರಿಗೆ ಅನುಕೂಲವಾಗಲಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ರೂ. 8,165 ಕೋಟಿ ಹೊರೆಯಾಗಲಿದೆ. ರೈತರ ಸಾಲ ಮನ್ನಾ ಮಾಡುವಂತೆ ಬಿಜೆಪಿ ಹಲವು ದಿನಗಳಿಂದ ಪಟ್ಟು ಹಿಡಿದಿತ್ತು. ಸಾಲ ಮನ್ನಾ ಮಾಡದಿದ್ದರೆ ಬೃಹತ್ ಹೋರಾಟ ನಡೆಸುವದಾಗಿ ಬಿಜೆಪಿ ಎಚ್ಚರಿಕೆ ನೀಡಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ರೈತರ ಸಾಲ ಮನ್ನಾ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ರೈತರ ಸಾಲವನ್ನು ಸರ್ಕಾರ 50 ಸಾವಿರಕ್ಕೆ ಸೀಮಿತಗೊಳಿಸದೆ ರೂ. 1 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.