ಮಡಿಕೇರಿ, ಜೂ. 6: ಮಗುವಿನಲ್ಲಿ ಕಂಡುಬರುವ ಅತಿಸಾರ ಭೇದಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ತಾ. 12 ರಿಂದ 24ರವರೆಗೆ ಆರೋಗ್ಯ ಇಲಾಖೆಯಿಂದ ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗವದು ಎಂದು ಜಿಲ್ಲಾ ಪ್ರಭಾರ ಆರೋಗ್ಯಾಧಿಕಾರಿ ಡಾ. ಶಿವಕುಮಾರ್ ತಿಳಿಸಿದ್ದಾರೆ.ತಮ್ಮ ಕಚೇರಿಯಲ್ಲಿಂದು ಸುದ್ದಿಗಾರರಿಗೆ ಈ ಕುರಿತು ಅವರು ಮಾಹಿತಿಯಿತ್ತರು. ಅತಿಸಾರ ಭೇದಿಯನ್ನು ತಡೆಯುವ ನಿಟ್ಟಿನಲ್ಲಿ ಓಆರ್‍ಎಸ್ ದ್ರಾವಣ ಸಹಕಾರಿಯಾಗಲಿದೆ ಎಂಬದನ್ನು ಮನಗಂಡ ಸರ್ಕಾರ ಇದನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ ಅದರಂತೆ ಈ ಬಾರಿಯು ತಾ. 12 ರಿಂದ 24ರವರೆಗೆ ಈ ಕಾರ್ಯಕ್ರಮ ನಡೆಯಲಿದೆ ಎಂದು ಶಿವಕುಮಾರ್ ಹೇಳಿದರು.

ಆರ್‍ಸಿಹೆಚ್ ಡಾ. ನೀಲೇಶ್ ಅವರು ಮಾತನಾಡಿ, ಅತಿಸಾರ ಭೇದಿಯಿಂದಾಗಿ ಪ್ರತಿ ವರ್ಷ 1.2 ಲಕ್ಷ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಶೇ. 10 ರಷ್ಟು ಮಕ್ಕಳ ಸಾವಿಗೆ ಇದು ಕಾರಣವಾಗುತ್ತಿದೆ. ಇದನ್ನು ಮಟ್ಟಹಾಕುವ ನಿಟ್ಟಿನಲ್ಲಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಮುದಾಯ ಹಾಗೂ ಆರೋಗ್ಯ ಕೇಂದ್ರದ ಮಟ್ಟದಲ್ಲಿ ಇದು ನಡೆಯಲಿದೆ. ಸಮುದಾಯ ಮಟ್ಟದಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಓಆರ್‍ಎಸ್ ಪೊಟ್ಟಣವನ್ನು ವಿತರಿಸಲಿದ್ದಾರೆ. ಮಾತ್ರವಲ್ಲದೆ ಗುಂಪು ಸಭೆಗಳನ್ನು ನಡೆಸಿ ಅತಿಸಾರ ಭೇದಿಯ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ಎಲ್ಲಾ ಶಾಲೆಗಳಲ್ಲೂ ಕೂಡ ಈ ಪ್ರಕ್ರಿಯೆ ನಡೆಯಲಿದೆ ಎಂದರು.

ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಆಶಾ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಈ ದಿಸೆಯಲ್ಲಿ ತರಬೇತಿಯನ್ನು ನೀಡಲಾಗಿದೆ. ಈ ಕಾರ್ಯಕ್ರಮದ ಮೇಲ್ವಿಚಾರಣೆಗಾಗಿ 245 ಕಡೆಗಳಲ್ಲಿ ಓಆರ್‍ಎಸ್ ಲಿಂಕ್ ಕಾರ್ನರ್‍ಗಳನ್ನು ತೆರೆಯಲಾಗುತ್ತದೆ ಎಂದು ನೀಲೇಶ್ ವಿವರಿಸಿದರು.