ವೀರಾಜಪೇಟೆ, ಜೂ. 5: ಬಿಟ್ಟಂಗಾಲ ಗ್ರಾಮದ ಎತ್ನಿಕ್ ಕಲ್ಯಾಣ ಮಂಟಪದ ಬಳಿಯ ಹೆದ್ದಾರಿ ರಸ್ತೆಯಲ್ಲಿ ನಿನ್ನೆ ರಾತ್ರಿ 7-30 ರ ಸಮಯದಲ್ಲಿ ಸಂಭವಿಸಿದ ಕಾರು ಮುಖಾಮುಖಿ ಡಿಕ್ಕಿಯಲ್ಲಿ ನ್ಯಾನೋ ಕಾರನ್ನು ಚಾಲಿಸುತ್ತಿದ್ದ ಎಸ್. ಕುಶಾಲಪ್ಪ (60) ಎಂಬವರು ಕಾಲು ಮುರಿದಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅವರ ಪತ್ನಿ ನೀರಜಾ ಎಂಬವರು ಗಾಯಗೊಂಡಿದ್ದಾರೆ. ಡಿಕ್ಕಿ ಸಂದರ್ಭ ಇಂಡಿಗೋ ಕಾರಿನ ಹಿಂದೆ ಇದ್ದ ಹೀರೋ ಹೋಂಡಾ ಸ್ಕೂಟರ್‍ನ್ನು ಚಾಲಿಸುತ್ತಿದ್ದ ಅಯನಾ(20) ಎಂಬಾಕೆಗೂ ಗಂಭೀರ ಗಾಯ ಉಂಟಾಗಿದ್ದು ಮೂರು ಮಂದಿಯನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ವೀರಾಜಪೇಟೆಯಲ್ಲಿ ನಡೆಯುತ್ತಿದ್ದ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಳ್ಳಲು ಕುಶಾಲಪ್ಪ ಅವರು ತಿತಿಮತಿಯಿಂದ (ಕೆ.ಎ.12 ಝೆಡ್ 654) ನ್ಯಾನೋ ಕಾರಿನಲ್ಲಿ ವೀರಾಜಪೇಟೆಗೆ ಬರುತ್ತಿದ್ದಾಗ ಎದುರುಗಡೆಯಿಂದ ಬಂದ ಇಂಡಿಗೋ (ಕೆ.ಎ.12 ಎಂ 7991) ಕಾರುಗಳ ನಡುವೆ ಡಿಕ್ಕಿ ಸಂಭವಿಸಿದೆ. ವೀರಾಜಪೇಟೆಯಿಂದ ಬಿಟ್ಟಂಗಾಲಕ್ಕೆ ತೆರಳುತ್ತಿದ್ದು ಇಂಡಿಗೋ ಕಾರಿನ ಹಿಂಬದಿಯಲ್ಲಿದ್ದ (ಕೆ.ಎ.01 ಇ.ಡಬ್ಲ್ಯು.496) ಸ್ಕೂಟರ್ ಕಾರಿನ ಹಿಂಬದಿಗೆ ಡಿಕ್ಕಿಯಾಗಿದೆ. ನ್ಯಾನೋ ಕಾರಿನ ಮುಂಭಾಗ ಪೂರ್ಣವಾಗಿ ಜಖಂಗೊಂಡಿದ್ದರೆ ಇಂಡಿಗೋ ಕಾರಿನ ಬಲಭಾಗ ಜಖಂಗೊಂಡಿದೆ. ಇಂಡಿಗೋ ಕಾರು ಪೊನ್ನಂಪೇಟೆಯ ಅರಣ್ಯ ಕಾಲೇಜಿಗೆ ಸೇರಿರುವದಾಗಿ ಪೊಲೀಸರು ತಿಳಿಸಿದ್ದು ಇಲ್ಲಿನ ಗ್ರಾಮಾಂತರ ಪೊಲೀಸರು ಇಂಡಿಗೋ ಕಾರಿನ ಚಾಲಕ ವೈ.ಎ. ವಿನಯ್ ವಿರುದ್ಧ ಪ್ರಕರಣ ದಾಖಲಿಸಿ ಎರಡು ಕಾರನ್ನು ವಶ ಪಡಿಸಿಕೊಂಡಿದ್ದಾರೆ.

ಡಿಕ್ಕಿಯಿಂದ ಗಂಭೀರ ಸ್ವರೂಪದ ಗಾಯಗೊಂಡಿರುವ ಕುಶಾಲಪ್ಪ ದಂಪತಿಗಳು ಅಂತರ್ರಾಷ್ಟ್ರೀಯ ಹಾಕಿ ಆಟಗಾರ ಎಸ್.ಕೆ. ಉತ್ತಪ್ಪ ಅವರ ಪೋಷಕರು ಎಂದು ತಿಳಿದುಬಂದಿದೆ.

ಅಯನಾ ಇಲ್ಲಿನ ಬ್ರೈಟ್ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿದ್ದು ವೀರಾಜಪೇಟೆಯಿಂದ ಬಿಟ್ಟಂಗಾಲದ ಮನೆಗೆ ಹೋಗುತ್ತಿದ್ದಾಗ ಡಿಕ್ಕಿ ಸಂಭವಿಸಿದೆ. ಕಾರಿಗೆ ಡಿಕ್ಕಿಯಾದ ರಭಸಕ್ಕೆ ಸ್ಕೂಟರ್ ಜಖಂಗೊಂಡಿದೆ.