ಸೋಮವಾರಪೇಟೆ, ಜೂ. 5: ಮಾನವೀಯತೆ, ದಯೆ, ಕರುಣೆ, ದಾನ ಧರ್ಮ ಇಲ್ಲದವನು ದೇವರಿಗೆ ಹತ್ತಿರವಾಗಲಾರ ಎಂದು ಮುದ್ದಿನಕಟ್ಟೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಮೀಪದ ಗೌಡಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪುಲಿಗುರಿ ಬಸವೇಶ್ವರ ದೇವಾಲಯ ವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಮಾನವೀಯತೆ ಇಲ್ಲದವನು ದೇವಾಲಯಕ್ಕೆ ಹೋದರೂ ಪ್ರಯೋಜನವಿಲ್ಲ. ಎದುರಿನ ವ್ಯಕ್ತಿಯಲ್ಲಿ ದೇವರನ್ನು ಕಾಣುವವನ ಹೃದಯದಲ್ಲೇ ದೇವರಿದ್ದಾನೆ ಎಂದು ವಿಶ್ಲೇಷಿಸಿದರು. ಧರ್ಮದ ಆಚರಣೆಗಳಲ್ಲೂ ವೈಜ್ಞಾನಿಕ ಕಾರಣಗಳಿವೆ. ಹೋಮಕ್ಕೆ ಗಿಡಮೂಲಿಕೆಗಳನ್ನು ಉಪಯೋಗಿಸುವದರಿಂದ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ. ದೇವಾಲಯದಲ್ಲಿ ಕೇಳಿಸುವ ನಾದದ ತರಂಗಗಳು ಮನಸ್ಸಿಗೆ ಉಲ್ಲಾಸವನ್ನು ತರುತ್ತವೆ. ಮದ್ಯದಂಗಡಿಗೆ, ದೇವಾಲಯಕ್ಕೆ ಹೋಗಿ ಬಂದವರನ್ನು ಒಮ್ಮೆ ಗಮನಿಸಿ ಸತ್ಯ ತಿಳಿಯುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗೌಡಳ್ಳಿ ಗ್ರಾಪಂ ಅಧ್ಯಕ್ಷ ಧರ್ಮಾಚಾರಿ, ದೇವಾಲಯ ಸಮಿತಿ ಅಧ್ಯಕ್ಷ ಜಿ.ಪಿ. ಸುನಿಲ್ ಕುಮಾರ್, ಜಿಪಂ ಸದಸ್ಯ ಬಿ.ಜೆ. ದೀಪಕ್, ತಾಪಂ ಸದಸ್ಯೆ ಕುಸುಮಾ ಅಶ್ವಥ್, ದಾನಿಗಳಾದ ಹರಪಳ್ಳಿ ರವೀಂದ್ರ, ಅರುಣ್ ಕೊತ್ತನಳ್ಳಿ, ಗಿರೀಶ್ ಮಲ್ಲಪ್ಪ, ಕೂಗೂರು ಮಧು ಕುಮಾರ್, ಬಿ.ಎಂ.ಮಂಜುನಾಥ್, ಹೆಗ್ಗುಳ ಸೋಮಶೇಖರ್, ಪ್ರಮುಖರಾದ ಎಸ್.ಬಿ.ಭರತ್ ಕುಮಾರ್, ಜಿ.ಎಂ.ಹೂವಯ್ಯ, ಮಂಜುನಾಥ್ ಆಚಾರ್ಯ, ಸುಳಿಮಳ್ತೆ ದಿವಾಕರ್ ಮತ್ತಿತರರು ಉಪಸ್ಥಿತರಿದ್ದರು.