ಸೋಮವಾರಪೇಟೆ,ಜೂ.5: ಕನ್ನಡ ಭಾಷೆ, ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿರುವ ಮಹನೀಯರ ನಾಡಾದ ಸೋಮವಾರಪೇಟೆಯಲ್ಲಿ ಇಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಗರದಲ್ಲಿ ನಡೆದ ನುಡಿ ಹಬ್ಬದ ಜಾತ್ರೆ ಸಹಸ್ರಾರು ಕನ್ನಡಾಭಿಮಾನಿಗಳ ಸಮ್ಮುಖದಲ್ಲಿ ಆಕರ್ಷಣೀಯವಾಗಿ ಮೂಡಿಬಂತು.
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕನ್ನಡಾಭಿಮಾನಿಗಳು ಮೆರವಣಿಗೆಯುದ್ದಕ್ಕೂ ‘ಸಿರಿಗನ್ನಡಂ ಗೆಲ್ಗೆ’ ಎಂಬ ಜಯಘೋಷ ಮೊಳಗಿಸಿದರು. ಇಲ್ಲಿನ ಬಾಣಾವರ ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿಯಿಂದ ಪ್ರಾರಂಭವಾದ ಕನ್ನಡ ತೇರು ನಗರದ ಪ್ರಮುಖ ಮಾರ್ಗಗಳಲ್ಲಿ ನಡೆದು ಸಮಾರಂಭದ ಒಕ್ಕಲಿಗರ ಸಮುದಾಯ ಭವನದಲ್ಲಿ ಸಮಾಪನಗೊಂಡಿತು.
ಸಮ್ಮೇಳನಾಧ್ಯಕ್ಷ ಹಿರಿಯ ಸಾಹಿತಿ ಚಂದ್ರಶೇಖರ ಮಲ್ಲೋರಹಟ್ಟಿ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು. ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವಿರಕ್ತ ಮಠಾಧೀಶರಾದ ವಿಶ್ವೇಶ್ವರ ಸ್ವಾಮೀಜಿ, ಜಿಲ್ಲಾ ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್, ತಾಲೂಕು ಅಧ್ಯಕ್ಷ ಜವರಪ್ಪ, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅವರುಗಳು ಮೆರವಣಿಗೆಯ ವಾಹನದಲ್ಲಿದ್ದರು.
ಮೆರವಣಿಗೆಗೆ ಡೋಲು ಬಡಿಯುವ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ ಚಾಲನೆ ನೀಡಿದರು. ಬಾಣಾವರ ರಸ್ತೆ, ಬಸವೇಶ್ವರ ರಸ್ತೆ, ಆನೆಕೆರೆ ರಸ್ತೆ, ವಿಶ್ವೇಶ್ವರಯ್ಯ ರಸ್ತೆ, ದೇವಸ್ಥಾನ ರಸ್ತೆ, ಮುಖ್ಯರಸ್ತೆ, ಬಸ್ ನಿಲ್ದಾಣ, ಕ್ಲಬ್ರಸ್ತೆ, ವಿವೇಕಾನಂದ ವೃತ್ತದ ಮೂಲಕ ಸಾಗಿದ ಮೆರವಣಿಗೆಯಲ್ಲಿ ಕನ್ನಡ ಸಾಹಿತ್ಯಾಭಿಮಾನಿಗಳು, ವಿವಿಧ ಕನ್ನಡಪರ
(ಮೊದಲ ಪುಟದಿಂದ) ಸಂಘಟನೆಗಳ ಕಾರ್ಯಕರ್ತರು, ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಜನಪ್ರತಿನಿಧಿಗಳು ಭಾಗವಹಿಸಿದ್ದರು.
ಮಂಡ್ಯದ ಡೊಳ್ಳುಕುಣಿತ, ಪೂಜಾ ಕುಣಿತ, ವೀರಗಾಸೆ, ವೀರಾಜಪೇಟೆಯ ಕೊಡವ ಜಾನಪದ ತಂಡ, ಕೊಡವ ವಾಲಗ, ತೆರೆ, ಕೊಣನೂರಿನ ನಾದಸ್ವರ ತಂಡಗಳು ಮೆರವಣಿಗೆಗೆ ಆಕರ್ಷಣೆಯನ್ನು ತಂದುಕೊಟ್ಟವು.
ಇದರೊಂದಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರುಗಳು, ಸ್ತ್ರೀ ಶಕ್ತಿ ಸಂಘಟನೆಗಳ ಪದಾಧಿಕಾರಿಗಳು ಕಳಸಹೊತ್ತು ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಕನ್ನಡ ಸಂಸ್ಕøತಿಯ ಸೊಬ ಗನ್ನು ಹೆಚ್ಚಿಸಿದ್ದರು. ಕನ್ನಡಾಂಬೆಯನ್ನು ಹೊತ್ತ ಅಲಂಕೃತ ವಾಹನ ಮೆರವಣಿಗೆಯನ್ನು ಮುನ್ನಡೆಸಿತು.
ಸಮ್ಮೇಳನದ ಅಂಗವಾಗಿ ಪಟ್ಟಣದ ಪ್ರಮುಖ ಮಾರ್ಗಗಳ ಎರಡೂ ಬದಿಯಲ್ಲಿ ಕನ್ನಡ ಧ್ವಜಗಳು ರಾರಾಜಿಸಿದ್ದರೆ, ತಳಿರುತೋರಣಗ ಳಿಂದ ನಗರ ಶೃಂಗಾರಗೊಂಡಿತ್ತು. ಸಮ್ಮೇಳನಕ್ಕೆ ಶುಭಕೋರುವ ವಿವಿಧ ಕನ್ನಡಪರ ಸಂಘಟನೆಗಳು, ಕನ್ನಡಾಭಿಮಾನಿಗಳ ಬ್ಯಾನರ್ಗಳು ನಗರದೆಲ್ಲೆಡೆ ಕಂಡುಬಂದವು. ಸಾಂಸ್ಕøತಿಕ ಹಬ್ಬದ ವಾತಾವರಣ ಮೂಡಿಸಿ ಮೆರವಣಿಗೆಯು ಇಲ್ಲಿನ ಖಾಸಗಿ ಬಸ್ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭ ಸಾರ್ವಜನಿಕರು ಪುಷ್ಪಾರ್ಚನೆ ಮಾಡಿದರು.
ಸಮ್ಮೇಳನದ ಅಂಗವಾಗಿ ಬಾಣಾವರ ರಸ್ತೆಯಲ್ಲಿ ನಿರ್ಮಿಸಲಾದ ದಿ. ಹೆಚ್.ಡಿ. ಗುರುಲಿಂಗಪ್ಪ ನೆನಪಿನ ದ್ವಾರವನ್ನು ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್ ಉದ್ಘಾಟಿಸಿ ದರು. ಆನೆಕೆರೆ ಬಳಿ ನಿರ್ಮಿಸಲಾದ ದಿ. ಸುಮನ್ ಶೇಖರ್ ನೆನಪಿನ ದ್ವಾರವನ್ನು ತಾ.ಪಂ. ಸದಸ್ಯೆ ತಂಗಮ್ಮ, ವಿವೇಕಾನಂದ ವೃತ್ತದ ಬಳಿ ನಿರ್ಮಿಸಲಾದ ಎಂ.ಆರ್. ಅಶೋಕ್ ಸ್ಮಾರಕ ದ್ವಾರವನ್ನು ಜಿ.ಪಂ. ಸದಸ್ಯ ಬಿ.ಜೆ. ದೀಪಕ್ ಉದ್ಘಾಟಿಸಿದರು.
ಆಲೇಕಟ್ಟೆ ರಸ್ತೆಯ ಬಳಿ ನಿರ್ಮಿಸ ಲಾದ ಸ್ವಾತಂತ್ರ್ಯ ಹೋರಾಟಗಾರ ಮಲ್ಲೇಗೌಡ ಸ್ಮಾರಕ ದ್ವಾರವನ್ನು ಜಿ.ಪಂ. ಸದಸ್ಯೆ ಸರೋಜಮ್ಮ ಹಾಗೂ ತಾ.ಪಂ. ಮಾಜೀ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ, ಸಭಾಂಗಣದ ಹೆಬ್ಬಾಗಿಲಿನ ಬಳಿ ನಿರ್ಮಿಸಲಾದ ಡಿ.ಸಿ. ಜಯರಾಂ ದ್ವಾರವನ್ನು ಉದ್ಯಮಿ ಅರುಣ್ಕಾಳಪ್ಪ, ಸಮ್ಮೇಳನದ ಸಭಾಂಗಣದ ಬಳಿ ಪತ್ರಕರ್ತ ಸಿ.ಎನ್. ಸುನಿಲ್ಕುಮಾರ್ ಹೆಸರಿನ ಪುಸ್ತಕ ಮಳಿಗೆಯನ್ನು ಬರಹಗಾರ್ತಿ ಜಲಾಕಾಳಪ್ಪ, ಒಕ್ಕಲಿಗರ ಸಮುದಾಯ ಭವನದಲ್ಲಿ ನಿರ್ಮಿಸ ಲಾಗಿದ್ದ ಗುರುಸಿದ್ಧ ಮಹಾಸ್ವಾಮೀಜಿ ವೇದಿಕೆಯನ್ನು ಮಾಜಿ ಸಚಿವ ಬಿ.ಎ. ಜೀವಿಜಯ ಉದ್ಘಾಟಿಸಿದರು.
ಮೆರವಣಿಗೆಗೂ ಮುನ್ನ ಬೆಳಿಗ್ಗೆ 8 ಗಂಟೆಗೆ ಒಕ್ಕಲಿಗರ ಸಮುದಾಯ ಭವನದಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ತಹಶೀಲ್ದಾರ್ ಕೃಷ್ಣ ನೆರವೇರಿಸಿದರು. ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ನಾಡಧ್ವಜ, ತಾಲೂಕು ಅಧ್ಯಕ್ಷ ಜವರಪ್ಪ ಅವರು ಪರಿಷತ್ತಿನ ಧ್ವಜಾರೋಹಣ ಮಾಡಿದರು. ಮೆರವಣಿಗೆಯ ನಂತರ ಒಕ್ಕಲಿಗರ ಸಮುದಾಯ ಭವನದಲ್ಲಿ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಭಾ ಕಾರ್ಯಕ್ರಮ ನಡೆಯಿತು. ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಸಮ್ಮೇಳನವನ್ನು ಉದ್ಘಾಟಿಸಿ ದರು.