ಮಡಿಕೇರಿ, ಜೂ. 5: 1972ರಲ್ಲಿ ವಿಶ್ವ ರಾಷ್ಟ್ರಗಳು ನೆಲ, ಜಲ, ವನದೊಂದಿಗೆ ಪ್ರಕೃತಿ ಸಂಪತ್ತು ಉಳಿವಿಗಾಗಿ ವಿಶ್ವ ಪರಿಸರ ದಿನವನ್ನು ಆಚರಣೆಗೆ ತಂದಿದ್ದು, ಸಂವಿಧಾನ ಬದ್ಧವಾಗಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹಕ್ಕು ಎಂದು ಒಂದನೇ ಜಿಲ್ಲಾ ಅಪರ ನ್ಯಾಯಾಧೀಶ ಡಿ. ಪರವೇಶ್ ಕರೆ ನೀಡಿದ್ದಾರೆ.

ಕೊಡಗಿನ ಜೀವನದಿ ಕಾವೇರಿ ಹಾಗೂ ಪ್ರಕೃತಿಯ ಉಳಿವಿಗಾಗಿ ಜಾಗೃತಿ ಮೂಡಿಸಲು ಇಲ್ಲಿನ ಗಾಂಧಿ ಮೈದಾನದಿಂದ ಕುಶಾಲನಗರಕ್ಕೆ ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಾ, ಇಂದಿನ ಸನ್ನಿವೇಶದಲ್ಲಿ ಕೊಡಗು ಸೇರಿದಂತೆ ದಕ್ಷಿಣ ಭಾರತಕ್ಕೆ ವರವಾಗಿರುವ ಕಾವೇರಿ ನದಿ ರಕ್ಷಣೆಗೆ ಪ್ರತಿಯೊಬ್ಬರು ಬದ್ಧರಾಗುವಂತೆ ತಿಳಿ ಹೇಳಿದರು.

ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್‍ಕುಮಾರ್ ಮಾತನಾಡಿ, ವಿಶ್ವ ಪರಿಸದ ದಿನದಂದು ಕಾವೇರಿ ಸ್ವಚ್ಛತಾ ಆಂದೋಲನ ಸಮಿತಿಯಿಂದ ವಿವಿಧ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಪ್ರಕೃತಿಯೊಂದಿಗೆ ನದಿ ರಕ್ಷಣೆಗಾಗಿ ಹಮ್ಮಿಕೊಂಡಿರುವ ಕಾಲ್ನಡಿಗೆ ಜಾಥಾ ಶ್ಲಾಘನೀಯ ಎಂದರು.

ಜಿಲ್ಲಾ ಕಾನೂನು ಪ್ರಾಧಿಕಾರ ಕಾರ್ಯದರ್ಶಿಗಳಾದ ನ್ಯಾಯಾಧೀಶ ಮೋಹನ್ ಪ್ರಭು ಅವರು ಮಾತನಾಡಿ, ಭಾರತ ಸಂವಿಧಾನದಲ್ಲಿ ಕೂಡ ಪರಿಸರ ರಕ್ಷಣೆಗೆ ಶಾಸನ ಬದ್ಧ ನಿಯಮ ಅಳವಡಿಸಿದ್ದು, ಆ ದಿಸೆಯಲ್ಲಿ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಯತ್ತ ಗಮನವಿಡುವಂತೆ ತಿಳಿ ಹೇಳಿದರು.

ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಸಿ.ಟಿ. ಜೋಸೆಫ್ ಮಾತನಾಡಿ, ಪರಿಸರ ಸಂರಕ್ಷಣೆಯೊಂದಿಗೆ ಆರೋಗ್ಯ ಪೂರ್ಣ ಸಮಾಜಕ್ಕಾಗಿ ಎಲ್ಲರೂ ಬದ್ಧತೆ ಕಂಡುಕೊಳ್ಳುವಂತೆ ನೆನಪಿಸಿದರು. ಕಾವೇರಿ ಸ್ವಚ್ಛತಾ ಆಂದೋಲನ ಸಂಚಾಲಕ ಚಂದ್ರಮೋಹನ್ ಪ್ರಾಸ್ತಾವಿಕ ನುಡಿಯೊಂದಿಗೆ ಜಾಥಾದ ಉದ್ದೇಶ ತಿಳಿಸಿದರು.

ಸಹಯೋಗ : ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಕಾವೇರಿ ಸ್ವಚ್ಛತಾ ಆಂದೋಲನ ಸಮಿತಿ, ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ, ಪೊಲೀಸ್ ಹಾಗೂ ಶಿಕ್ಷಣ ಇಲಾಖೆ, ನಗರಸಭೆ, ಪತ್ರಕರ್ತರ ಸಂಘ, ವಿಜ್ಞಾನ ಪರಿಷತ್, ಗ್ರೀನ್ ಸಿಟಿ ಫೋರಂ ಸೇರಿದಂತೆ ಕಾಲ್ನಡಿಗೆ ಜಾಥಾಕ್ಕೆ ಹಲವು ಸಂಘ ಸಂಸ್ಥೆಗಳು ಸಹಯೋಗ ನೀಡಿದವು.

ವಿದ್ಯಾರ್ಥಿಗಳು ಭಾಗಿ : ಕುಶಾಲನಗರ ವಿವೇಕಾನಂದ ವಿದ್ಯಾಲಯ, ಕೂಡಿಗೆ ಸೈನಿಕ ಶಾಲೆ, ಸರಕಾರಿ ಪ.ಪೂ. ಕಾಲೇಜು, ಐಶ್ವರ್ಯ ವಿದ್ಯಾಲಯ, ಕೆಎಂಜೆ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು. ವಿವಿಧ ಇಲಾಖೆಗಳಿಂದ ಎಂ.ಎಸ್. ಚಿಣ್ಣಪ್ಪ, ಉಮಾ ಶಂಕರ್, ಸಂಘ ಸಂಸ್ಥೆಗಳಿಂದ ಬೇಬಿ ಮ್ಯಾಥ್ಯೂ, ಸತ್ಯ, ಕೃಷ್ಣಮೂರ್ತಿ, ಉನ್ನಿಕೃಷ್ಣ, ಶಂಭು ಲಿಂಗಪ್ಪ, ಜಯಪ್ಪ, ಸೋಮಶೇಖರ್, ಮಂಜುನಾಥ್, ಮನು, ಫಾತಿಮಾ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.