ಮಡಿಕೇರಿ, ಮೇ 24: ಮಡಿಕೇರಿ ಪುರಸಭೆಯು ಒಂದೊಮ್ಮೆ ಜಿಲ್ಲೆಯ ಪ್ರತಿಷ್ಠಿತ ಜನಪ್ರತಿನಿಧಿಗಳ ಆಳ್ವಿಕೆ ಹೊಂದಿದ್ದ ಇತಿಹಾಸದೊಂದಿಗೆ, ಇಂದು ಒಂದು ರೀತಿ ತೂಗುಕತ್ತಿಯ ನಡುವೆ ಇಂಜಿನ್ ರಹಿತ ಹಳಿತಪ್ಪಿದ ರೈಲು ಬೋಗಿಗಳಂತೆ ಕಾರ್ಯ ನಿರ್ವಹಿಸುತ್ತಿರುವ ಅನುಭವ ವಾಗತೊಡಗಿದೆ.

ರಾಜ್ಯ ಸರಕಾರದಿಂದ ವಾರ್ಷಿಕ ರೂ. 30 ಕೋಟಿಯಂತೆ ನಗರೋತ್ಥಾನ ಅಭಿವೃದ್ಧಿ ಹಣ 3 ಕಂತುಗಳಲ್ಲಿ ರೂ. 90 ಕೋಟಿ ಬಿಡುಗಡೆಗೊಂಡಿದ್ದು, ಈ ಕೆಲಸ ನಿಖರವಾಗಿ ಎಲ್ಲಿಯೂ ಕಾಣದಾಗಿದೆ. ಇನ್ನು ಕುಡಿಯುವ ನೀರಿಗಾಗಿ ಈಗಾಗಲೇ ರೂ. 42 ಕೋಟಿ ಬಿಡುಗಡೆಗೊಂಡಿದ್ದರೂ, ಮಡಿಕೇರಿ ಪಟ್ಟಣದಲ್ಲಿ ಎಲ್ಲಿಯೂ ಹೇಳಿಕೊಳ್ಳು ವಂತಹ ಕೆಲಸ ಕಾಣದಾಗಿದೆ.

ಮತ್ತೊಂದೆಡೆ ನೇರವಾಗಿ ಕೇಂದ್ರ ಸರಕಾರದಿಂದ ಬಿಡುಗಡೆಗೊಂಡಿರುವ ಒಳಚರಂಡಿ ಕಾಮಗಾರಿ ಯೋಜನೆಗೆ ರೂ. 35 ಕೋಟಿ ಹಣ ಪೋಲಾಗು ತ್ತಿದ್ದು, ಹಿಂದೆ ಹೆಂಚು ಮನೆಗಳಿಗೆ ಅಳವಡಿಸುತ್ತಿದ್ದ ಹೊಗೆ ಕೊಳವೆ ಗಾತ್ರದ ಪೈಪುಗಳನ್ನು ಈ ಒಳಚರಂಡಿಗೆ ಅಳವಡಿಸಿದ್ದು, ಮನಬಂದಂತೆ ನಗರ ರಸ್ತೆಗಳನ್ನು ಅಗೆದು ಹಾಳುಗೆಡವಿರುವ ದೃಶ್ಯವಷ್ಟೇ ಕಾಮಗಾರಿಯ ಕುರುಹು ಎಂಬಂತಿದೆ.

ಅಂತಃಕಲಹವೇ ಸಾಧನೆ

ನಗರಸಭೆಗೆ ವರ್ಷವೊಂದಕ್ಕೆ ರೂ. 50 ರಿಂದ 60 ಕೋಟಿಗೂ ಅಧಿಕ ಮೊತ್ತ ಕೇವಲ ಅಭಿವೃದ್ಧಿಗಾಗಿ ಮಾತ್ರವಲ್ಲದೆ, ಪರಿಶಿಷ್ಟ ಜಾತಿ, ವರ್ಗದ ಕಲ್ಯಾಣಕ್ಕಾಗಿ 30 ರಿಂದ 40 ಕೋಟಿ ಬಿಡುಗಡೆಯಾಗಿದ್ದು, ಹಣ ಹಂಚಿಕೆ ಯಲ್ಲಿ ನಗರಸಭಾ ಸದಸ್ಯರೊಳಗಿನ ಅಂತಃಕಲಹದಿಂದ ಅಧಿಕಾರಿಗಳು ನೇರ ತೀರ್ಮಾನ ಕೈಗೊಳ್ಳು ವಂತಾಗಿದೆ.

ಇಲ್ಲಿ ಮಾಜಿ ಅಧ್ಯಕ್ಷೆ ಜುಲೇಕಾಬಿ ಹಾಗೂ ಉಪಾಧ್ಯಕ್ಷೆ ಲೀಲಾ ಶೇಷಮ್ಮ ಬಹಿರಂಗ ಅಸಮಾಧಾನ ಹೊರಗೆಡವಿ ದರೆ, ಮತ್ತೋರ್ವ ಮಾಜಿ ಅಧ್ಯಕ್ಷೆ ಶ್ರೀಮತಿ ಬಂಗೇರ ಹಿಂದಿನ ನಗರಸಭಾ ಅಧ್ಯಕ್ಷ ನಂದಕುಮಾರ್ ಮೇಲಿನ ಮುನಿಸಿನಿಂದ ಕಾಂಗ್ರೆಸ್ ವಿರುದ್ಧ ಸಿಡಿದೆದ್ದು ಬಿಜೆಪಿ ಜತೆ ಗುರುತಿಸಿಕೊಂಡಿದ್ದಾರೆ. ಇವರೊಂದಿಗೆ ಮೀಸಲು ಕ್ಷೇತ್ರದ ಸದಸ್ಯೆ ವೀಣಾಕ್ಷಿ ಬಿಜೆಪಿ ಬೆಂಬಲಿಸಿ ಈ ಇಬ್ಬರು ಸದಸ್ಯತ್ವ ಕಳೆದುಕೊಂಡಿದ್ದರು.

ಮತ್ತೆ ಪೈಪೋಟಿ

ಕಾನೂನು ಹೋರಾಟದಲ್ಲಿ ಸದಸ್ಯತ್ವ ರದ್ದು ಆದೇಶ ಪ್ರಶ್ನಿಸಿ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿರುವ ಶ್ರೀಮತಿ ಬಂಗೇರ ಹಾಗೂ ವೀಣಾಕ್ಷಿ ಇಬ್ಬರು ತಮಗಾದ ಅವಮಾನದಿಂದ ಮತ್ತೆ ಹೋರಾಟ ನಡೆಸಲು ಕೋರ್ಟ್ ಆದೇಶ ಪ್ರತಿಗಾಗಿ ಕಾಯುತ್ತಿದ್ದಾರೆ.

ಸಂಸದರೆಡೆಗೆ ಬಿಜೆಪಿ ಸಿಟ್ಟು

ಈ ನಡುವೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಉದ್ದೇಶ ಪೂರ್ವಕ ನಗರಸಭಾ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಗೈರಾಗಿ ಅಧಿಕಾರ ತಪ್ಪಿಸಿದ್ದಾರೆ ಎಂಬ ಸಿಟ್ಟು ಪಕ್ಷದ ಕೆಲವು ಸದಸ್ಯರಲ್ಲಿ ಹಾಗೂ ಇತರರಲ್ಲಿ ಮನೆ ಮಾಡಿದಂತಿದೆ.

ಈ ಎಲ್ಲ ಬೆಳವಣಿಗೆ ನಡುವೆ ಮೇಲ್ನೋಟಕ್ಕೆ ಕಾಂಗ್ರೆಸ್ ಹಿರಿಯ ಸದಸ್ಯೆ ಕಾವೇರಮ್ಮ ಸೋಮಣ್ಣ, ನಗರಸಭಾ ಅಧ್ಯಕ್ಷರಾಗಿದ್ದು, ಬಿಜೆಪಿಯ ಟಿ.ಎಸ್. ಪ್ರಕಾಶ್ ಉಪಾಧ್ಯಕ್ಷರಾಗಿ ದ್ದರೂ ಪರಸ್ಪರ ಹೊಂದಾಣಿಕೆ ಇಲ್ಲದಿರುವದು ಅನೇಕ ಸಭೆಗಳಲ್ಲಿ ಕಿತ್ತಾಟದೊಂದಿಗೆ ಬಹಿರಂಗ ಗೊಂಡಿದೆ. ಈ ಅವಕಾಶವನ್ನು ನಗರಸಭೆಯ ನಾಲ್ವರು ಎಸ್‍ಡಿಪಿಐ ಸದಸ್ಯರು ಸದ್ಭಳಕೆ ಮಾಡಿಕೊಂಡು ಬಾಹ್ಯವಾಗಿ ಕಾಂಗ್ರೆಸ್ಸಿಗೆ ಬೆಂಬಲವಾಗಿ ಕಂಡುಬಂದರೂ, ತಮ್ಮ ತಮ್ಮ ವ್ಯಾಪ್ತಿಯ ಅಭಿವೃದ್ಧಿ ಕೆಲಸಕ್ಕೆ ತಕ್ಕಂತೆ ತೊಡಗಿಸಿಕೊಂಡಿರುವದು ಆಡಳಿತಾರೂಢ ಸದಸ್ಯರಲ್ಲೇ ಒಳಬೇಗುದಿಗೆ ಕಾರಣವಾಗಿದೆ.

ಇನ್ನು ಐವರು ನಾಮನಿರ್ದೇಶನ ಸದಸ್ಯರು ತಮ್ಮ ಪಾಡಿಗೆ ತಾವು ‘ಆಟಕ್ಕುಂಟು-ಲೆಕ್ಕಕ್ಕಿಲ್ಲ’ ಎಂಬಂತಿ ದ್ದಾರೆ. ಮೇಲ್ನೋಟಕ್ಕೆ ಪೌರಾಯುಕ್ತೆ ಶುಭ ಕಟ್ಟುನಿಟ್ಟಿನ ಅಧಿಕಾರಿಯಂತೆ ಕಂಡುಬಂದರೂ, ಹಳಿತಪ್ಪಿರುವ ರೈಲಿ ನಂತೆ ಸಾಗುತ್ತಿರುವ ಆಡಳಿತ ವ್ಯವಸ್ಥೆ ಯಲ್ಲಿ ಪರಸ್ಪರ ಹೊಂದಾಣಿಕೆಯಲ್ಲದೆ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ.

ಒಂದೆಡೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ನಡುವೆ ನಗರಸಭಾ ಆಡಳಿತಕ್ಕೆ ಮುಕ್ತ ಸಂಪರ್ಕದ ಕೊರತೆಯಿಂದ ಕೋಟಿ ಕೋಟಿ ರೂಪಾಯಿ ಬಿಡುಗಡೆ ಗೊಂಡಿದ್ದರೂ, ಕಾಮಗಾರಿಯ ಮೇಲೆ ಹಿಡಿತವಿಲ್ಲದೆ ಎಲ್ಲ ಲೆಕ್ಕವು ದಾಖಲೆ ಗಳಿಗೆ ಸೀಮಿತವೆಂಬಂತಾಗಿದೆ. ಕೇವಲ 8 ಸಾವಿರದಷ್ಟು ಜನವಸತಿಯೊಂದಿಗೆ ಗರಿಷ್ಠ 35 ರಿಂದ 38 ಸಾವಿರ ಜನಸಂಖ್ಯೆಯ ಮಡಿಕೇರಿ ನಗರದ ಅಭಿವೃದ್ಧಿ ಇಂದಿಗೂ ನಿಂತ ನೀರಿನಂತೆ ಆಗಿದೆ. ಇದಕ್ಕೆ ನಗರಸಭೆ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಕಾರ್ಯಾಂಗದ ಇಚ್ಚಾಶಕ್ತಿಯ ಕೊರತೆ ಮತ್ತು ಹೊಂದಾಣಿಕೆ ಅಥವಾ ಅಧಿಕಾರಿಗಳ ಮೇಲಿನ ಹಿಡಿತ ತಪ್ಪಿರುವದೇ ಕಾರಣವೆಂಬ ನಾಗರಿಕ ಮುಖಂಡರ ಆರೋಪ. ಇನ್ನು ಮಳೆ ಶುರುವಾದರೆ ಮುಂದಿನ ನಾಲ್ಕು ತಿಂಗಳಲ್ಲಿ ರಸ್ತೆ-ಚರಂಡಿ ಹಣವೆಲ್ಲ ನೀರಿನಲ್ಲಿ ಕೊಚ್ಚಿ ಹೋದರೆ ಅಚ್ಚರಿ ಇಲ್ಲ!