ಸೋಮವಾರಪೇಟೆ, ಮೇ 24: ನಗರದ ಖಾಸಗಿ ಬಸ್ ನಿಲ್ದಾಣದ ಲ್ಲಿರುವ ಅಂಗಡಿ ಮಳಿಗೆಯನ್ನು ಹರಾಜಿನಲ್ಲಿ 12 ಸಾವಿರಕ್ಕೆ ಪಡೆಯ ಲಾಗಿದ್ದು, ನಂತರ ಒಳಮಾರ್ಗದಲ್ಲಿ ಕೇವಲ 3 ಸಾವಿರಕ್ಕೆ ನೀಡಲಾಗಿದೆ ಎಂಬ ವಿಚಾರ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಪಟ್ಟಣ ಪಂಚಾಯಿತಿಗೆ ನಷ್ಟವಾಗುತ್ತಿದ್ದರೂ, ಮಾಸಿಕ ಬಾಡಿಗೆ ರೂ. 12 ಸಾವಿರದಿಂದ ರೂ. 3 ಸಾವಿರಕ್ಕೆ ಇಳಿಸಿ ಅದೇ ವ್ಯಕ್ತಿಗೆ ನೀಡಿರುವ ಒಳ ಮರ್ಮವೇನು? ಎಂದು ಆಕ್ರೋಶ ವ್ಯಕ್ತಪಡಿಸಿದ ವಿಪಕ್ಷ ಸದಸ್ಯರು, ಸಭೆಯಲ್ಲಿ ಒಗ್ಗಟ್ಟಿನ ಹೋರಾಟ ನಡೆಸಿದರು. ಇದನ್ನು ಕಂಡ ಆಡಳಿತ ಪಕ್ಷದ ಸದಸ್ಯರೂ ಕೆಲಕಾಲ ಕಂಗಾಲಾದರು.

ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಹಿಂದಿನ ಸಭೆಯ ನಡಾವಳಿ ಓದಿ ಅಂಗೀಕರಿಸುವ ಸಂದರ್ಭ, ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಅಂಗಡಿ ಮಳಿಗೆಯೊಂದಕ್ಕೆ ಸಂಬಂಧಿಸಿದಂತೆ ಸದಸ್ಯರ ಗಮನಕ್ಕೆ ತಾರದೆ ನಡಾವಳಿ ನಮೂದಿಸಲಾಗಿದೆ. ಆ ಮೂಲಕ ಪಂಚಾಯಿತಿಗೆ ನಷ್ಟ ಉಂಟು ಮಾಡಿದ್ದಾರೆ ಎಂದು ನಾಮನಿರ್ದೇಶಿತ ಸದಸ್ಯ ಇಂದ್ರೇಶ್ ಅಸಮಾಧಾನ ವ್ಯಕ್ತಪಡಿಸಿದರು.

(ಮೊದಲ ಪುಟದಿಂದ) ಇದಕ್ಕೆ ದನಿಗೂಡಿಸಿದ ವಿಪಕ್ಷ ಸದಸ್ಯರುಗಳಾದ ಆದಂ, ಶೀಲಾ ಡಿಸೋಜ ಅವರುಗಳು, ಈ ಹಿಂದೆ ಅಂಗಡಿ ಮಳಿಗೆಯೊಂದನ್ನು 12 ಸಾವಿರ ರೂ. ಮಾಸಿಕ ಬಾಡಿಗೆಗೆ ವ್ಯಕ್ತಿಯೋರ್ವರು ಪಡೆದಿದ್ದರು. ಇದೇ ಮಳಿಗೆಯನ್ನು ಅದೇ ವ್ಯಕ್ತಿಗೆ ಕೇವಲ 3 ಸಾವಿರ ರೂಪಾಯಿಗಳಿಗೆ ನೀಡಲಾಗಿದೆ ಎಂದು ಪ್ರಶ್ನಿಸಿದರು.

ಈ ವಿಚಾರದ ಚರ್ಚೆ ಕಾವೇರುತ್ತಿದ್ದಂತೆ ಎದ್ದುನಿಂತ ಇಂದ್ರೇಶ್, ಇದು ನಿಮ್ಮ ಮನೆಯ ಆಸ್ತಿಯಲ್ಲ. ಇದರಲ್ಲಿ ಕೆಲ ಅಧಿಕಾರಿಗಳು ಮತ್ತು ಅಧ್ಯಕ್ಷರು ಶಾಮೀಲಾಗಿರುವ ಸಂಶಯವಿದೆ ಎಂದರು.

ಇದರಿಂದ ಕೆರಳಿದ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಸಭೆಯಲ್ಲಿ ಇತರ ವಿಚಾರಗಳಲ್ಲಿ ವಿಚಾರ ಪ್ರಸ್ತಾಪಿಸಲಾಗಿದೆ ಹಾಗೂ ಕಾನೂನು ಅಭಿಪ್ರಾಯ ಕೇಳಿ ನಿರ್ಣಯ ಕೈಗೊಳ್ಳಲಾಗಿದೆ. ಸದಸ್ಯರು ಬಾಯಿಗೆ ಬಂದಂತೆ ಮಾತನಾಡುವದು ಬೇಡ; ಸಭೆಗೆ ಅವರನ್ನೇ ಕರೆಸುತ್ತೇನೆ ಎಂದರು.

ಇದರಿಂದ ಆಕ್ರೋಶಿತರಾದ ಸದಸ್ಯ ಇಂದ್ರೇಶ್ ‘ರೋಲ್‍ಕಾಲ್ ಮಾಡುವವರನ್ನೆಲ್ಲಾ ಸಭೆಗೆ ಕರೆಸಬೇಕಾದ ಅವಶ್ಯಕತೆ ಇಲ್ಲ. ನಿರ್ಣಯವನ್ನು ರದ್ದುಪಡಿಸಿ’ ಎಂದು ಹರಿಹಾಯ್ದರು. ನಿರ್ಣಯ ರದ್ದುಪಡಿಸುವದಿಲ್ಲ ಎಂದು ಅಧ್ಯಕ್ಷರು ನುಡಿದಾಗ, ಕಾಂಗ್ರೆಸ್‍ನ ಆದಂ, ಶೀಲಾ ಡಿಸೋಜ, ವೆಂಕಟೇಶ್, ಮೀನಾಕುಮಾರಿ, ಇಂದ್ರೇಶ್, ರಾಜಣ್ಣ ಹಾಗೂ ಉದಯಶಂಕರ್ ಸಭಾಂಗಣದ ಮಧ್ಯದಲ್ಲಿ ಜಮಾಯಿಸಿ ನಿರ್ಣಯ ರದ್ದುಪಡಿಸದೆ ಸಭೆ ನಡೆಸಲು ಬಿಡುವದಿಲ್ಲವೆಂದು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಪರಸ್ಪರ ಆರೋಪ, ಪ್ರತ್ಯಾರೋಪ, ಕೂಗಾಟ, ಕಿರುಚಾಟ ನಡೆಯಿತು. ಒಂದು ಹಂತದಲ್ಲಿ ಗುಮಾಸ್ತ ರಫೀಕ್ ಹಾಗೂ ಸದಸ್ಯ ಇಂದ್ರೇಶ್ ನಡುವೆ ತೀವ್ರ ವಾಗ್ವಾದವೂ ನಡೆಯಿತು.

ಕಾರ್ಯಸೂಚಿಯಲ್ಲಿ ವಿಷಯವೇ ಇಲ್ಲದಿರುವದರಿಂದ ರದ್ದುಪಡಿಸಿ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ. ಸಭೆಗೆ ಅಡ್ಡಿಪಡಿಸಿದರೆ ನಾನು ದೂರು ಕೊಡಬೇಕಾಗುತ್ತದೆ ಎಂದು ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್ ಹೇಳಿದರು.

‘ಯಾವದೇ ವಿಚಾರದ ಬಗ್ಗೆ ಚರ್ಚೆ ನಡೆಸಿ ವಿರೋಧ ವ್ಯಕ್ತಪಡಿಸಿದರೂ ಅಧ್ಯಕ್ಷರು ದೂರು ಕೋಡುತ್ತೇನೆ ಎನ್ನುತ್ತಾರೆ; ಈ ರೀತಿ ಸದಸ್ಯರನ್ನು ಹೆದರಿಸುವದು ಬೇಡ’ ಎಂದು ಶೀಲಾ ಡಿಸೋಜ ಎದಿರೇಟು ನೀಡಿದರು.

ಕಳೆದ ಬಾರಿ 12 ಸಾವಿರಕ್ಕೆ ಮೊದಲ ಟೆಂಡರ್ ಹಾಗೂ ಎರಡನೆಯವರು 11ಸಾವಿರ ರೂ.ಗಳಿಗೆ ಟೆಂಡರ್ ಕೂಗಿದ್ದಾರೆ. ಆದರೆ 2ನೇ ಟೆಂಡರ್ ದಾರರಿಗೆ ಅವಕಾಶ ನೀಡದೆ ಮೊದಲನೆಯವರಿಗೆ ಕೇವಲ 3 ಸಾವಿರ ರೂ. ಬಾಡಿಗೆಗೆ ನೀಡಿದ್ದು ಸರಿಯಲ್ಲ. ನಿರ್ಣಯ ರದ್ದು ಪಡಿಸಬೇಕೆಂದು ಪಟ್ಟು ಹಿಡಿದಾಗ ಮುಖ್ಯಾಧಿಕಾರಿ ನಾಚಪ್ಪ ಮಧ್ಯ ಪ್ರವೇಶಿಸಿ ರದ್ದುಪಡಿಸುವ ಬಗ್ಗೆ ನಿರ್ಣಯ ಕೈಗೊಳ್ಳುತ್ತೇವೆ. ಈ ಬಗ್ಗೆ ಲಿಖಿತವಾಗಿ ನೀಡುತ್ತೇನೆ ಎಂದು ಸಮಾಧಾನಪಡಿಸಿದರಾದರೂ ಸಭೆಯ ಅಂತ್ಯದಲ್ಲಿ ಈ ವಿವಾದಕ್ಕೆ ಯಾವದೇ ಅಂತ್ಯ ಕಾಣದೆ ಸಭೆ ಮುಕ್ತಾಯಗೊಂಡಿತು.

ಇತ್ತೀಚೆಗೆ ಪಟ್ಟಣದ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಸುತ್ತಿರುವ ಬಗ್ಗೆ ಪಂಚಾಯಿತಿ ಧಾಳಿ ನಡೆಸಿ 500ರಿಂದ 2000ದವರೆಗೆ ಮನಸ್ಸಿಗೆ ಬಂದಂತೆ ದಂಡ ವಸೂಲಿ ಮಾಡಲಾಗಿದೆ ಹಾಗೂ ಈ ಸಂದರ್ಭ ವಾರ್ಡ್‍ನ ಸದಸ್ಯರನ್ನು ಕರೆದುಕೊಂಡು ಹೋಗಿಲ್ಲ. ಕ್ಲಬ್ ರಸ್ತೆಯ ಕೊಡವ ಸಮಾಜದ ಎದುರು ವಾಹನ ಸಂಚಾರವನ್ನು ನಿರ್ಬಂಧಿಸಿದ್ದಾರೆ. ಆದರೆ ಈ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳದೆ ಕ್ರಮ ತೆಗೆದುಕೊಂಡಿರುವದು ಸರಿಯಲ್ಲ ಎಂದು ಸದಸ್ಯೆ ಶೀಲಾ ಡಿಸೋಜ ಅಸಮಾಧಾನ ವ್ಯಕ್ತಪಡಿಸಿದರು.

ಕಾಮಗಾರಿ ವಿಚಾರಕ್ಕೆ ಬಂದರೆ ಪಂಚಾಯಿತಿಯಲ್ಲಿ ಆದಾಯವಿಲ್ಲ ಎನ್ನುತ್ತೀರಿ; ಆದರೆ ಅಂಗಡಿ, ಮಳಿಗೆಗಳನ್ನು ಪರಭಾರೆ ಮಾಡಿ ಕೆಲವರು ಹಣಗಳಿಸುತ್ತಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳಿ ಎಂದರೆ ಈವರೆಗೂ ಕ್ರಮಕೈಗೊಂಡಿಲ್ಲ ಎಂದು ಉದಯಶಂಕರ್ ಅಸಮಾಧಾನ ವ್ಯಕ್ತಪಡಿಸಿದರು.