ಸೋಮವಾರಪೇಟೆ, ಮೇ 24: ಇಲ್ಲಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಹಾಗೂ ಬೆಂಗಳೂರಿನ ಕರ್ನಾಟಕ ಬಾಲ ಭವನ ವತಿಯಿಂದ ಸ್ಥಳೀಯ ತಾಲೂಕು ಸ್ತ್ರಿ ಶಕ್ತಿ ಭವನದಲ್ಲಿ ಆರಂಭವಾಗಿರುವ ಮಕ್ಕಳ ಬೇಸಿಗೆ ಶಿಬಿರಕ್ಕೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಪರಿಚಯಿಸಲು ಇಂತಹ ಬೇಸಿಗೆ ಶಿಬಿರಗಳು ವೇದಿಕೆಯನ್ನು ಕಲ್ಪಿಸುತ್ತದೆ. ಪೋಷಕರು ತಮ್ಮ ಮಕ್ಕಳನ್ನು ಇಂತಹ ಶಿಬಿರಗಳಿಗೆ ಕಳುಹಿಸುವದರಿಂದ ವಿವಿಧ ಕಲೆಗಳನ್ನು ಅಭ್ಯಸಿಸಲು ಸಹಕಾರಿಯಾಗುತ್ತದೆ ಎಂದರು.

ಶಿಬಿರದಲ್ಲಿ 8 ರಿಂದ 15 ವರ್ಷದ ಒಳಗಿನ ಮಕ್ಕಳು ಪಾಲ್ಗೊಂಡಿದ್ದರು. ಶಿಬಿರ ಪ್ರತಿದಿನ ಪೂರ್ವಾಹ್ನ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಸಲಾಗುವದು. ಚಿತ್ರಕಲೆ, ಕರಕುಶಲ ವಸ್ತುಗಳ ತಯಾರಿಕೆ, ಜೇಡಿಮಣ್ಣಿನ ಕಲೆ, ಕಸದಿಂದ ರಸ, ಸಮೂಹ ಸಂಗೀತ, ಸಮೂಹ ನೃತ್ಯ, ಯೋಗ, ಕರಾಟೆ ಚಟುವಟಿಕೆಗಳಲ್ಲಿ ಯಾವದಾದರೂ ಮೂರರಿಂದ ಐದು ಚಟುವಟಿಕೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಸ್ಥಳೀಯ ಬೇಡಿಕೆಗೆ ಅನುಗುಣವಾಗಿ ಇನ್ನಿತರ ಚಟುವಟಿಕೆಗಳಿದ್ದಲ್ಲಿ ಆದ್ಯತೆ ನೀಡಲಾಗುವದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದರು.

ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯೆ ತಂಗಮ್ಮ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಮೇಲ್ವಿಚಾರಕಿ ಯಶೋಧ, ಸಿಬ್ಬಂದಿ ಶೀಲಾ ಉಪಸ್ಥಿತರಿದ್ದರು.