ಸುಂಟಿಕೊಪ್ಪ, ಮೇ 24: :ಬ್ಲೂ ಬಾಯ್ಸ್ ಯೂತ್ ಕ್ಲಬ್‍ನ ವತಿಯಿಂದ ದಿ. ಡಿ.ಶಿವಪ್ಪ ಅವರ ಜ್ಞಾಪಕಾರ್ಥ 22 ನೇ ವರ್ಷದ ರಾಜ್ಯ ಮಟ್ಟದ ‘ಗೋಲ್ಡ್ ಕಪ್’ ಫುಟ್‍ಬಾಲ್ ಟೂರ್ನಿಯ ಬುಧವಾರ ನಡೆದ ಪಂದ್ಯಾವಳಿಯಲ್ಲಿ ಹೋರಿಜನ್ ಎಫ್.ಸಿ.ಬೆಂಗಳೂರು, ಜೆಆರ್‍ಟಿ ಮೊಗ್ರಲ್ ಕುಂಬ್ಳೆ ತಂಡಗಳು ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ ಪಂದ್ಯಾವಳಿಗೆ ಪ್ರವೇಶ ಪಡೆಯಿತು.

ಜಿ.ಯಂ.ಪಿ.ಶಾಲಾ ಮೈದಾನದಲ್ಲಿ ನಡೆದ ಮೊದಲನೇ ಪಂದ್ಯಾವಳಿಯು ಸಿಟಿಜನ್ ಸ್ಪೋಟ್ಸ್ ಕ್ಲಬ್ ಉಪ್ಪಳ ಮತ್ತು ಬೆಂಗಳೂರಿನ ಹೋರಿಜನ್ ಎಫ್.ಸಿ. ನಡುವೆ ಬಹು ರೋಚಕತೆಯಿಂದ ಕೂಡಿತ್ತು.

2 ತಂಡಗಳು ಸಮಾನವಾದÀ ಪೈಪೋಟಿಯಿಂದ ಗೋಲು ಗಳಿಸಿದ ಕಾರಣ ಟ್ರೈ ಬ್ರೇಕರ್ ನೀಡಲಾಯಿತು. ಬೆಂಗಳೂರಿನ ಹೋರಿಜನ್ ಎಫ್.ಸಿ. ಮಾಡಿದ ಕ್ಷೇತ್ರ ರಕ್ಷಣೆಯಿಂದ ಸಿಟಿಜನ್ ಸ್ಪೋಟ್ಸ್ ಕ್ಲಬ್ ಉಪ್ಪಳ ತಂಡವು 4-2 ಗೋಲುಗಳಿಂದ ಸೋಲನ್ನು ಅನುಭವಿಸಿತು.

ದ್ವಿತೀಯ ಪಂದ್ಯಾವಳಿಯು ಜೆಆರ್‍ಟಿ ಮೊಗ್ರಲ್ ಕುಂಬ್ಳೆ ಮತ್ತು ಪನ್ಯ ಎಫ್.ಸಿ.ಪನ್ಯ ತಂಡಗಳ ನಡುವೆ ನಡೆದು ಜೆಆರ್‍ಟಿ ಮೊಗ್ರಲ್ ಕುಂಬ್ಳೆ ತಂಡದ ಮುನ್ನಡೆ ಆಟಗಾರ ಸುಹಾದ್ 6ನೇ ನಿಮಿಷದಲ್ಲಿ 1 ಗೋಲು ಗಳಿಸುವ ಮೂಲಕ ಕುಂಬ್ಳೆ ತಂಡಕ್ಕೆ ಮುನ್ನಡೆಯನ್ನು ಒದಗಿಸಿಕೊಟ್ಟರು.

ದ್ವಿತೀಯಾರ್ಧದಲ್ಲಿ ಪನ್ಯ ತಂಡ ಗೋಲು ಗಳಿಸುವಲ್ಲಿ ವಿಫಲತೆಗೊಂಡರು. 1-0 ಗೋಲಿನಿಂದ ಜೆಆರ್‍ಟಿ ಮೊಗ್ರಲ್ ಕುಂಬ್ಳೆ ಎರಡನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿತು.

ಇಂದಿನ ಫುಟ್ಬಾಲ್ ಪಂದ್ಯಾವಳಿಯನ್ನು ಸುಂಟಿಕೊಪ್ಪ ಚೆಸ್ಕಾಂ ಇಲಾಖೆಯ ಕಿರಿಯ ಅಭಿಯಂತರರಾದ ರಮೇಶ್ ಉದ್ಘಾಟಿಸಿದರು.