ಮಡಿಕೇರಿ, ಮೇ 24: ಪ್ರವಾಸೋದ್ಯಮ ಇಲಾಖೆಯ ಮೂಲಕ ಜಿಲ್ಲೆಯ 16 ತಾಣಗಳನ್ನು ಅಭಿವೃದ್ಧಿ ಪಡಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಪ್ರಥಮವಾಗಿ ಭಾಗಮಂಡಲ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ರೂ. 20 ರಿಂದ 25 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರು ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು ಈ ಕುರಿತು ಮಾಹಿತಿ ನೀಡಿದರು. ಭಾಗಮಂಡಲಕ್ಕೆ ಅಪಾರ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಆಗಮಿಸುತ್ತಿದ್ದಾರೆ.

ಯಾತ್ರಾರ್ಥಿಗಳಿಗೆ ವಸತಿ, ಶೌಚಾಲಯ, ನೀರು ಇತ್ಯಾದಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವದೂ ಅಗತ್ಯವಾಗಿದೆ. ಸೂಕ್ತ ವ್ಯವಸ್ಥೆಗಳಿದ್ದಲ್ಲಿ ಪರಿಸರವೂ ಸ್ವಚ್ಛವಾಗಿರುತ್ತದೆ. ಅಗತ್ಯತೆಗಳಿಲ್ಲದಿದ್ದರೆ ಪರಿಸರವೂ ಹಾಳಾಗುತ್ತದೆ ಎಂದ ಸಚಿವರು ಈ ಹಿನ್ನೆಲೆಯಲ್ಲಿ 16 ತಾಣಗಳ ಪೈಕಿ

ಪ್ರಥಮವಾಗಿ ಭಾಗಮಂಡಲದಲ್ಲಿ ಅಭಿವೃದ್ಧಿ ಯೋಜನೆ ಹಮ್ಮಿಕೊಳ್ಳಲಾಗುವದು. ರೂ. 20 ರಿಂದ 25 ಕೋಟಿ ವೆಚ್ಚದ ಕಾಮಗಾರಿ ಇದಾಗಲಿದೆ. ಇದರೊಂದಿಗೆ ಮೇಲ್ಸೇತುವೆ ನಿರ್ಮಾಣ ಕೆಲಸ ಪ್ರತ್ಯೇಕವಾಗಿ ನಡೆಯಲಿದೆ ಎಂದು ಅವರು ತಿಳಿಸಿದರು.

ದಿಡ್ಡಳ್ಳಿ

ದಿಡ್ಡಳ್ಳಿ ಸಮಸ್ಯೆ ಪರಿಹಾರ ಕಂಡಿದೆ. ಸದ್ಯದಲ್ಲೇ ಪಾಲೆಮಾಡು ಕ್ರಿಕೆಟ್ ಸ್ಟೇಡಿಯಂ ವಿಚಾರವೂ ಬಗೆ ಹರಿಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಾಲುದಾರಿ ಮುಕ್ತ

ತಾಮರ ರೆಸಾರ್ಟ್‍ನ ದಾರಿ ವಿವಾದ ಕುರಿತು ಪ್ರತಿಕ್ರಿಯಿಸಿದ ಅವರು ನಕಾಶೆಯಲ್ಲಿ ಕಾಲುದಾರಿ ಎಂದಿದ್ದು, ಅದನ್ನು ಮುಕ್ತವಾಗಿ ನಡೆದಾಡಲು ಬಿಡಲೇಬೇಕಾಗಿದೆ. ಈ ಕುರಿತು ಸೂಕ್ತ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಆದರೆ ವಾಹನ ತೆರಳುವ ರಸ್ತೆಯಾಗಿ ಪರಿವರ್ತಿಸಲು ಸಾಧ್ಯವಾಗದು ಎಂದರು.