ಮಡಿಕೇರಿ, ಮೇ 17: ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಈ ಬಗ್ಗೆ ಪಕ್ಷದ ನಾಯಕರು, ಕಾರ್ಯಕರ್ತರು ಸಂಘಟನಾತ್ಮಕವಾಗಿ ಕಾರ್ಯ ನಿರ್ವಹಿಸಬೇಕೆಂದು ಪಕ್ಷದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿಷ್ಣುನಾದನ್ ಕರೆ ನೀಡಿದ್ದಾರೆ.ನಗರದ ಹೊಟೇಲ್ ವ್ಯಾಲಿವ್ಯೂನಲ್ಲಿ ಇಂದು ಪಕ್ಷದ ಪ್ರಮುಖರೊಂದಿಗೆ ವಿಚಾರ ವಿನಿಮಯ ನಡೆಸುವದ ರೊಂದಿಗೆ ಪ್ರತ್ಯೇಕವಾಗಿ ಎಲ್ಲರ ಅಭಿಪ್ರಾಯವನ್ನು ಕ್ರೋಢೀಕರಿಸಿದರು. ಕಳೆದ ಬಾರಿ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಕೇವಲ ಮೂರು ಸಾವಿರ ಮತದ ಅಂತರದಲ್ಲಿ ಪಕ್ಷ ಸೋಲು ಕಂಡಿದೆ. ಈ ಕ್ಷೇತ್ರವನ್ನು ಮತ್ತೆ ಪಡೆದುಕೊಳ್ಳುವದರೊಂದಿಗೆ ಇನ್ನೊಂದು ವಿಧಾನಸಭಾ ಕ್ಷೇತ್ರದಲ್ಲೂ ಪಕ್ಷ ಜಯಭೇರಿ ಬಾರಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕೆಂದರು. ಕಾಂಗ್ರೆಸ್ ಪಕ್ಷಕ್ಕೆ ಈ ಹಿಂದೆ ಸಮಸ್ಯೆ ಬಂದಾಗ ಕರ್ನಾಟಕ ರಾಜ್ಯ ಪಕ್ಷಕ್ಕೆ ಪುನಶ್ಚೇತನ ನೀಡಿದೆ. ಇಂದಿರಾಗಾಂಧಿ ಅವರು ಚಿಕ್ಕಮಗಳೂರು ಹಾಗೂ ಸೋನಿಯಾ ಗಾಂಧಿಯವರನ್ನು ಬಳ್ಳಾರಿ ಕ್ಷೇತ್ರದಲ್ಲಿ ಗೆಲ್ಲಿಸಿ, ಪಕ್ಷ ತನ್ನ ಅಸ್ತಿತ್ವ ಕಾಪಾಡಿಕೊಂಡಿದೆ. ಈ ಬಾರಿಯೂ ರಾಜ್ಯದಲ್ಲಿ ಕಾಂಗ್ರೆಸ್‍ಗೆ ಆಪತ್ತು ಎದುರಾದ ಸಂದರ್ಭ ಜನತೆ ಕೈ ಹಿಡಿದಿದ್ದಾರೆ. ಇದು ಮುಂದುವರಿ ಯಬೇಕೆಂದು ವಿಷ್ಣುನಾದನ್ ಹೇಳಿದರು.

ಬಹಿರಂಗಸಭೆಯಲ್ಲಿ ಮಾತನಾಡಿದ ಬಳಿಕ ಅವರು ಪ್ರಮುಖರೊಂದಿಗೆ ಗುಪ್ತ ಸಮಾಲೋಚನೆ ನಡೆಸಿ ಅಭಿಪ್ರಾಯ ಕ್ರೋಢೀಕರಿಸಿದರು.

ಸಭೆಯ ಸಂದರ್ಭ ಪಕ್ಷದ ಅಧ್ಯಕ್ಷ ಟಿ.ಪಿ. ರಮೇಶ್, ಮಾಜಿ ಸಚಿವೆ ಸುಮಾ ವಸಂತ್, ಕೆ.ಪಿ.ಸಿ.ಸಿ.ಯ ಜಿಲ್ಲಾ ಉಸ್ತುವಾರಿಗಳಾದ ಹುಸೇನ್, ಮಾಜಿ ಸಂಸದ ಸಿದ್ಧರಾಜು, ಮಾಜಿ ಎಂ.ಎಲ್.ಸಿ. ಅರುಣ್ ಮಾಚಯ್ಯ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಸೇರಿದಂತೆ ಮುಂಚೂಣಿ ಘಟಕಗಳ ಪ್ರಮುಖರು ಪಾಲ್ಗೊಂಡಿದ್ದರು.