ನಾಪೋಕ್ಲು, ಮೇ. 17 : ಇಲ್ಲಿಗೆ ಸಮೀಪದ ಚೆರಿಯಪರಂಬು ರಸ್ತೆಯಲ್ಲಿ ತ್ಯಾಜ್ಯದ ರಾಶಿ ತುಂಬಿದ್ದು, ಭೀಕರ ರೋಗ ಹರಡಲು ರಹದಾರಿ ನೀಡಿದಂತಾಗಿದೆ. ಚೆರಿಯಪರಂಬು ಸನಿಹದ ಕಾವೇರಿ ನದಿಗೆ ತೆರಳುವ ರಸ್ತೆಯ ಮಧ್ಯದಲ್ಲಿ ಕಳೆದ ಕೆಲವು ದಿನಗಳಿಂದ ಹೊಟೇಲ್, ಅಂಗಡಿಗಳ ತ್ಯಾಜ್ಯಗಳನ್ನು ರಾತ್ರಿಯ ಸಮಯದಲ್ಲಿ ತಂದು ಎಸೆದು ಹೋಗುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ತ್ಯಾಜ್ಯದ ರಾಶಿ ದುರ್ಗಂಧ ಬೀರುತ್ತಿದ್ದು ಜನರು ನಡೆದಾಡಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲೇ ಸುತ್ತಲೂ ನೂರಾರು ಗುಡಿಸಲುಗಳನ್ನು ನಿರ್ಮಿಸಿಕೊಂಡು ಬಡ ಕೂಲಿ ಕಾರ್ಮಿಕರು ವಾಸವಾಗಿದ್ದಾರೆ. ದುರ್ವಾಸನೆಯಿಂದ ಬವಣೆ ಪಡುವಂತಾಗಿದೆ. ಇದೀಗ ಈ ವ್ಯಾಪ್ತಿಯಲ್ಲಿ ಮಳೆಯಾಗುತ್ತಿದ್ದು, ತ್ಯಾಜ್ಯ ಕೊಳೆತು ಕಾಲರಾದಂತಹ ಭೀಕರ ರೋಗಳು ಹರಡುವ ಸಾಧ್ಯತೆಗಳಿವೆ. ಮಾತ್ರವಲ್ಲದೆ ಕೊಳೆತ ವಸ್ತುಗಳು ಕಾವೇರಿ ನದಿಯ ಒಡಲು ಸೇರುತ್ತಿದ್ದು, ಕಾವೇರಿ ನದಿ ಕಲುಷಿತಗೊಳ್ಳುತ್ತಿದೆ. ಆರೋಗ್ಯ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಕ್ರಮಕೈಗೊಳ್ಳಬೇಕಾಗಿ ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ. ನಾಪೋಕ್ಲು ವ್ಯಾಪ್ತಿಯಲ್ಲಿ ಎರಡು ತಿಂಗಳಿನಿಂದ ಕಾಮಾಲೆ ರೋಗ ಹರಡಿದ್ದು, ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿ ಕ್ರಮಕೈಗೊಳ್ಳಬೇಕಾದ ಅಗತ್ಯವಿದೆ ಎಂದು ನಾಗರಿಕರು ಒತ್ತ್ತಾಯಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಸಾಂಕ್ರಾಮಿಕ ರೋಗಗಳು ಹರಡುವ ದಿನಗಳು ದೂರವಿಲ್ಲ ಎಂಬ ಮಾತು ಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಈ ಪರಿಸರದಲ್ಲಿ ಹಾಕಿ ಪಂದ್ಯಾಟ ಗಳು ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯ ಕ್ರೀಡಾಪ್ರೇಮಿಗಳು ಆಗಮಿಸುತ್ತಿರುವದರಿಂದ ತ್ಯಾಜ್ಯ ನಿರ್ವಹಣೆಯ ಬಗ್ಗೆ ಸಂಬಂಧಪಟ್ಟ ವರು ಕೂಡಲೆ ಕ್ರಮಕೈಗೊಳ್ಳ ಬೇಕಾಗಿದೆ. ಊರು ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ದಿಂಡಿನ ಹಾಕಿದಂತಾದೀತು.

-ದುಗ್ಗಳ ಸದಾನಂದ