ಸೋಮವಾರಪೇಟೆ, ಮೇ 17: ಯುವ ಜನತೆಗೆ ನೆರವು ಕಲ್ಪಿಸುವ ಮಹತ್ವಾಕಾಂಕ್ಷೆಯ ಕೌಶಲ್ಯ ಕರ್ನಾಟಕ ಯೋಜನೆಯನ್ನು ಸೋಮವಾರಪೇಟೆ ತಾಲೂಕಿನಲ್ಲಿ ಅಧಿಕೃತವಾಗಿ ಅನುಷ್ಠಾನಗೊಳಿಸಲಾಯಿತು.

ಇಲ್ಲಿನ ಸ್ತ್ರೀ ಶಕ್ತಿ ಭವನ ಹಾಗೂ ತಾಲೂಕು ಕಚೇರಿಯಲ್ಲಿ ಯೋಜನೆಗೆ ಚಾಲನೆ ನೀಡಿದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಮಾತನಾಡಿ, ಯುವ ಜನತೆ ಉದ್ದೇಶಿತ ಯೋಜನೆಯ ಪ್ರಯೋಜನ ಪಡೆಯಲು ಮುಂದೆಬರಬೇಕು ಎಂದು ಕರೆ ನೀಡಿದರು. ಕೇಂದ್ರ ಸರ್ಕಾರ ಸ್ಕಿಲ್ ಇಂಡಿಯಾ ಹೆಸರಿನಡಿ ಯುವ ಜನಾಂಗಕ್ಕೆ ಉದ್ಯೋಗ, ಆರ್ಥಿಕ ಭದ್ರತೆ ಕಲ್ಪಿಸಲು ವಿನೂತನ ಯೋಜನೆ ಜಾರಿಗೆ ತಂದಿದೆ. ಪ್ರಸಕ್ತ ಸಾಲಿನಲ್ಲಿ ದೇಶದ 48 ಕೋಟಿ ಯುವಜನರಿಗೆ ಸೌಲಭ್ಯ ಒದಗಿಸುವ ಗುರಿಹೊಂದಲಾಗಿದೆ. ಕರ್ನಾಟಕ ಸರ್ಕಾರದ ವತಿಯಿಂದ ಕೌಶಲ್ಯ ಕರ್ನಾಟಕ ಯೋಜನೆಯಡಿ ಕಾರ್ಯಕ್ರಮ ಅನುಷ್ಠಾನಗೊಳ್ಳುತ್ತಿದ್ದು, 18 ವರ್ಷ ಮೇಲ್ಪಟ್ಟ ಯುವಕ-ಯುವತಿಯರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ರಂಜನ್ ಮನವಿ ಮಾಡಿದರು.

ತಾಲೂಕು ತಹಶೀಲ್ದಾರ್ ಕೃಷ್ಣ ಮಾತನಾಡಿ, ಪ್ರಸಕ್ತ ವರ್ಷ 5 ಲಕ್ಷ ಮಂದಿ ಯುವಕ-ಯುವತಿಯರಿಗೆ ಕೌಶಲ್ಯ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಇದರಲ್ಲಿ ಶೇ. 70 ಮಂದಿಗೆ ಉದ್ಯೋಗ ಹಾಗೂ ಶೇ. 30ರಷ್ಟು ಮಂದಿಗೆ ಸ್ವ ಉದ್ಯೋಗ ಕಲ್ಪಿಸುವ ಬಗ್ಗೆ ಯೋಜನೆ ರೂಪಿಸಲಾಗಿದೆ ಎಂದರು.

10 ದಿನಗಳ ಕಾಲ ಯೋಜನೆಗೆ ನೋಂದಣಿ ಕಾರ್ಯ ನಡೆಯುವದ ರಿಂದ ತಾಲೂಕಿನಲ್ಲಿ ನೋಡಲ್ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ ಅವರನ್ನು ನೇಮಿಸಲಾಗಿದೆ. 18 ವರ್ಷ ಮೇಲ್ಪಟ್ಟ ಯುವಕ ಯುವತಿಯರು ತಮ್ಮ ಸ್ವ ಪರಿಚಯ,ಆಧಾರ್ ಸಂಖ್ಯೆ ಹಾಗೂ ಇ-ಮೇಲ್ ವಿಳಾಸದೊಂದಿಗೆ ತಾಲೂಕು ಕಚೇರಿ ಆವರಣದಲ್ಲಿರುವ ಚುನಾವಣಾ ಶಾಖೆಯ ಕೊಠಡಿಯಲ್ಲಿ ಕಡ್ಡಾಯವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ತಾಲೂಕು ಪಂಚಾಯಿತಿ ಸದಸ್ಯೆ ತಂಗಮ್ಮ, ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ, ತಾಲೂಕು ಪಂಚಾಯಿತಿ ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ಸುನೀಲ್ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿ ದ್ದರು.