ಮಡಿಕೇರಿ, ಮೇ 16: ಜಿಲ್ಲೆಯ ಎಲ್ಲಾ ಪಶು ಆಸ್ಪತ್ರೆ, ಪಶು ಚಿಕಿತ್ಸಾಲಯ ಮತ್ತು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳನ್ನು ಬಂದ್ ಮಾಡಿ ಎಲ್ಲಾ ರೀತಿಯ ಪಶು ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸಿ ಮೀರಸಕ್ಸೇನಾ ನೇತೃತ್ವದ ಸಮಿತಿಯ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಮಡಿಕೇರಿ ನಗರ ಪಶು ಆಸ್ಪತ್ರೆ ಎದುರು ಪಶು ವೈದ್ಯರು ಹಾಗೂ ಸಿಬ್ಬಂದಿಗಳು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ.

ಮೀರಸಕ್ಸೇನಾ ನೇತೃತ್ವದ ಸಮಿತಿಯ ಶಿಫಾರಸ್ಸುಗಳನ್ನು ಅನುಷ್ಠಾನ ಮಾಡದೇ ಇರುವದರಿಂದ ಇಲಾಖೆಯ ಸುಮಾರು ಹತ್ತು ಸಾವಿರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಬಡ್ತಿ ಮತ್ತು ಹೆಚ್ಚಿನ ವೇತನ ಸಿಗದೆ ತೊಂದರೆಯಾಗಿದೆ. ಶಿಫಾರಸ್ಸು ಅನುಷ್ಠಾನಗೊಂಡಿದ್ದಲ್ಲಿ ಪ್ರತೀ ಹೋಬಳಿಗೆ ಒಬ್ಬರು ಪಶು ವೈದ್ಯರು ತಾಲೂಕು ಕೇಂದ್ರಕ್ಕೆ ಮೂರು ಮಂದಿ ಪಶು ವೈದ್ಯರು ನೇಮಕಗೊಂಡು ರೈತರುಗಳಿಗೆ ಪ್ರಯೋಜವಾಗುತ್ತಿತ್ತು ಎಂದು ಆರೋಪಿಸಿದ ಪ್ರತಿಭಟನಾಕಾರರು ಮೀರ ಸಕ್ಸೇನಾ ಸಮಿತಿಯ ಶಿಫಾರಸ್ಸು ಅನುಷ್ಠಾನ ಮಾಡುವವರೆಗೆ ಪಶು ಆಸ್ಪತ್ರೆ, ಚಿಕಿತ್ಸಾ ಕೇಂದ್ರಗಳನ್ನು ಬಂದ್ ಮಾಡಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳುವದಾಗಿ ಮುಷ್ಕರ ನಡೆಸುವದಾಗಿ ಪತ್ರಿಕೆಯೊಂದಿಗೆ ತಿಳಿಸಿದರು.

ಈ ಸಂದರ್ಭ ಕರ್ನಾಟಕ ಪಶು ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಸಿ. ನಾಗರಾಜ, ಉಪಾಧ್ಯಕ್ಷ ಡಾ.ಕೆ.ಪಿ. ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿ ಡಾ. ಬಿ.ಜಿ. ಗಿರೀಶ್, ಖಜಾಂಚಿ ಡಾ. ಶಾಂತೇಶ, ಕಾರ್ಯದರ್ಶಿ ಡಾ.ಪಿ.ಸಿ. ಬೊಳ್ಳ, ಜಿಲ್ಲಾ ಪಶು ವೈದ್ಯಕೀಯ ಪರೀಕ್ಷಕರು ಮತ್ತು ವೈದ್ಯಕೀಯ ಸಹಾಯಕ ಸಂಘದ ಜಿಲ್ಲಾಧ್ಯಕ್ಷ ಎಸ್. ನವೀನ್‍ಕುಮಾರ್, ಕಾರ್ಯದರ್ಶಿ ಲಿಂಗರಾಜ್ ಹಾಗೂ ಇನ್ನಿತರರು ಇದ್ದರು.