ಶ್ರೀಮಂಗಲ, ಮೇ 16: ಸೌದೆ ಒಲೆ ಮೂಲಕ ಅಡುಗೆ ಮಾಡುವದ ರಿಂದ ಹೊಗೆ-ಶಾಖದಿಂದ ಆರೋಗ್ಯ ಕೆಡುವದರೊಂದಿಗೆ ಪರಿಸರ ಮಾಲಿನ್ಯವು ಉಂಟಾಗುತ್ತದೆ. ಮಾಲಿನ್ಯ ಮುಕ್ತ ಹಾಗೂ ಆರೋಗ್ಯಕರ ಕೊಡಗು ನಿರ್ಮಿಸುವ ಪ್ರಥಮ ಹೆಜ್ಜೆಯಾಗಿ ಬಡ ಜನತೆಗೆ ಅಡುಗೆ ಸಿಲಿಂಡರ್ ಅನ್ನು ಉಚಿತವಾಗಿ ನೀಡಲು ಯೋಜನೆ ರೂಪಿಸಿರುವುದಾಗಿ ರಾಜ್ಯ ಅರಣ್ಯ ಕೈಗಾರಿಕೆ ಅಭಿವೃದ್ದಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಅಭಿಪ್ರಾಯಪಟ್ಟರು. ಕುಟ್ಟ ಸಮುದಾಯ ಕೇಂದ್ರದಲ್ಲಿ ನಡೆದ, ಕುಟ್ಟ ಗ್ರಾ.ಪಂ. ವ್ಯಾಪ್ತಿಯ 11 ಫಲಾನುಭವಿಗಳಿಗೆ ಸರಕಾರದ ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಅನುದಾನದಲ್ಲಿ ಉಚಿತ ಅಡುಗೆ ಅನಿಲ ಸಿಲಿಂಡರ್ ಮತ್ತು ಗ್ಯಾಸ್ ಸ್ಟವ್ ವಿತರಿಸಿ ಅವರು ಮಾತನಾಡಿದರು.

ಜಿ.ಪಂ. ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ ಮಾತನಾಡಿ, ಬಡವರ ಜೀವನ ಮಟ್ಟವನ್ನು ಸುಧಾರಿಸಲು ರಾಜ್ಯದ ಕಾಂಗ್ರೆಸ್ ಸರಕಾರ ನಿರಂತರ ಕಾರ್ಯಕ್ರಮ ಹಮ್ಮಿಕೊಂಡಿದೆ. ಹಲವು ದಶಕದಿಂದ ವಸತಿ ರಹಿತರಿಗೆ ರಾಜ್ಯ ಕಾಂಗ್ರೆಸ್ ಸರಕಾರ 92 ಸಿ ಮೂಲಕ ಹಕ್ಕು ಪತ್ರ ನೀಡುತ್ತಿದೆ ಎಂದರು.

ರಾಜ್ಯ ವಕ್ಫ್ ಮಂಡಳಿ ಉಪಾಧ್ಯಕ್ಷ ಆಲೀರ ಎರ್ಮು ಹಾಜಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರಕಾರ ಬಡತನದಲ್ಲಿರುವ ಜನರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಿದ್ದು, ಇದರ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.

ಕುಟ್ಟ ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾ.ಪಂ. ಸದಸ್ಯ ಪಲ್ವೀನ್ ಪೂಣಚ್ಚ, ಗ್ರಾ.ಪಂ. ಉಪಾಧ್ಯಕ್ಷ ಪ್ರಕಾಶ್ ಉತ್ತಪ್ಪ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪಿ.ಕೆ. ಪೊನ್ನಪ್ಪ, ಗ್ರಾ.ಪಂ. ಸದಸ್ಯೆ ರುಕ್ಮಿಣಿ, ತಾ. ಅಕ್ರಮ ಸಕ್ರಮ ಸಮಿತಿ ಸದಸ್ಯ ಹೆಚ್.ವೈ ರಾಮಕೃಷ್ಣ, ಕುಟ್ಟ ವೃತ್ತ ನಿರೀಕ್ಷಕ ದಿವಾಕರ್, ಮಾಂಗೇರ ಪೊನ್ನಪ್ಪ ಮತ್ತಿತರರು ಹಾಜರಿದ್ದರು.