ಕೂಡಿಗೆ, ಮೇ 16: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂದರನಗರ ಗ್ರಾಮದ ನಿವಾಸಿಗಳಿಗೆ ಕಾಯ್ದಿರಿಸಿದ್ದ ರುದ್ರಭೂಮಿ ಜಾಗವನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಸುಂದರನಗರ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಶಾಸಕರಿಗೆ ಮನವಿ ನೀಡಿದ ಮೇರೆಗೆ ಇಂದು ಶಾಸಕ ಅಪ್ಪಚ್ಚುರಂಜನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದರಂತೆ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿ, ಸುಂದರನಗರ ಗ್ರಾಮಕ್ಕೆ ಪುರಾತನ ಕಾಲದಿಂದಲೂ ರುದ್ರಭೂಮಿಯನ್ನು ಕಾದಿರಿಸಲಾಗಿದೆ. ಮತ್ತು ಕೆರೆಯನ್ನು ಯಾವದೇ ಕಾರಣಕ್ಕೆ ಮುಚ್ಚಬಾರದು ಇದರಿಂದ ಸುತ್ತಮುತ್ತಲ ರೈತರಿಗೆ ತೊಂದರೆಯಾಗುವದರಿಂದ ಇನ್ನೆರಡು ದಿನಗಳಲ್ಲಿ ಇದರ ಸರ್ವೆ ಕಾರ್ಯವನ್ನು ನಡೆಸಿ ಹದ್ದುಬಸ್ತನ್ನು ಗುರುತಿಸಿ ಸ್ಥಳೀಯರಿಗೆ ಅನುಕೂಲ ಮಾಡಿಕೊಡಲಾಗುವದು. ಈ ವಿಚಾರವಾಗಿ ಈಗಾಗಲೇ ದೂರವಾಣಿ ಮೂಲಕ ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳಿಗೆ ಸರ್ವೆ ಕಾರ್ಯವನ್ನು ನಾಳೆಯಿಂದಲೇ ಪ್ರಾರಂಭಿಸಬೇಕೆಂದು ಸೂಚನೆ ನೀಡಲಾಗಿದೆ ಎಂದರು.

ಇದೇ ಸಂದರ್ಭ ಶಾಸಕರು ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆಕೆರೆಯ ಕೆರೆಯಲ್ಲಿ ಹೂಳೆತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು.

ಈ ಸಂದರ್ಭ ಜಿ.ಪಂ. ಸದಸ್ಯೆ ಮಂಜುಳಾ, ತಾ.ಪಂ ಸದಸ್ಯ ಗಣೇಶ್, ಕೂಡುಮಂಗಳೂರು ಗ್ರಾ.ಪಂ ಸದಸ್ಯ ಬಾಸ್ಕರ್ ನಾಯಕ್, ಸಾವಿತ್ರಿ, ಜ್ಯೋತಿಪ್ರಮೀಳ, ಜಯಮ್ಮ, ಮಾಜಿ ಸದಸ್ಯ ಕುಮಾರಸ್ವಾಮಿ, ಕೂಡುಮಂಗಳೂರು ಬಿಜೆಪಿ ಬ್ಲಾಕ್ ಅಧ್ಯಕ್ಷ ಮಂಜುನಾಥ್, ತಾಲೂಕು ಬಿಜೆಪಿ ಉಪಾಧ್ಯಕ್ಷ ಕೆ.ಕೆ.ಭೋಗಪ್ಪ, ಬಿಜೆಪಿ ಸ್ಥಳೀಯ ಮುಖಂಡ ಕೆ.ಎಂ.ಚಂದ್ರು ಸೇರಿದಂತೆ ಮತ್ತಿತರರು ಇದ್ದರು.