ಸೋಮವಾರಪೇಟೆ, ಮೇ 15: ಸಮೀಪದ ಮಸಗೋಡು ಗ್ರಾಮದಲ್ಲಿ ಪುನರ್‍ನಿರ್ಮಾಣಗೊಂಡಿರುವ ಮಹಾಲಿಂಗೇಶ್ವರ ದೇವಸ್ಥಾನದ ಲೋಕಾರ್ಪಣಾ ಕಾರ್ಯಕ್ರಮ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.ಪ್ರತಿಷ್ಠಾಪನೆಯ ಅಂಗವಾಗಿ ದೇವತಾ ಪ್ರಾರ್ಥನೆಯ ಮೂಲಕ ಪೂಜಾ ಕೈಂಕರ್ಯಗಳು ಹಾಸನದ ವೇದಬ್ರಹ್ಮ ಘನಪಾಟಿಗಳಾದ ಕ್ರಷ್ಣಮೂರ್ತಿಯವರ ಪೌರೋಹಿತ್ಯದಲ್ಲಿ ಅರ್ಚಕರಾದ ಯಡೂರು ಸರ್ವೇಶ್ ರವರ ಸಹಕಾರದಲ್ಲಿ ನಡೆಯಿತು.

ಮಹಾಗಣಪತಿ ಪೂಜೆ, ಪುಣ್ಯಹವಾಚನ, ದೇವನಾಂದಿ, ಅಂಕುರಾರ್ಪಣೆ, ಕೌತುಕ ಬಂಧನ, ಸರ್ಪವಿಕಿರಣ, ಪಂಚಗವ್ಯಮೇಳ, ಬಿಂಬಶುದ್ಧಿ, ಅಗ್ಯುತಾರಣ, ಜಲಾಧಿವಾಸ, ಕ್ಷೀರಾಧಿವಾಸ, ಮಹಾಗಣಪತಿ ಹೋಮ, ಪಂಚಗವ್ಯ, ಪ್ರಾಯಶ್ಚಿತ ಹೋಮ, ನವಗ್ರಹ ಹೋಮ, ವಸ್ತ್ರಾಧಿ, ಧಾನ್ಯಾಧಿ, ರತ್ನಾಧಿ, ಪುಷ್ಪಾಧಿವಾಸ, ರಾಕ್ಷೋಘ್ನ, ವಾಸ್ತು, ಅಘೋರಾಸ್ತ್ರ, ಪ್ರತಿಷ್ಠಾಂಗ, ಪರ್ಯಾಯತ್ರಯ ಹೋಮಗಳು ನಡೆದು ದಿಗ್ಬಲಿ, ಶಯ್ಯಾಧಿವಾಸ, ಅಷ್ಠಾವಧಾನ ಸೇವೆ ನಂತರ ಮಹಾಮಂಗಳಾರತಿ ನಡೆಯಿತು.

ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯ ಸಾನ್ನಿಧ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿಗಳಾದ ಶಂಭುನಾಥ ಮಹಾಸ್ವಾಮೀಜಿಗಳು ವಹಿಸಿ ಮಾತನಾಡಿ, ಯಾವ ಮನೆಯಲ್ಲಿ ಹಿರಿಯರಿಗೆ, ಸ್ತ್ರೀಯರಿಗೆ ಗೌರವವಿರುತ್ತದೆಯೊ ಅಂತಹ ಮನೆಯಲ್ಲಿ ಭಗವಂತ ನೆಲೆಸಿರುತ್ತಾನೆ ಎಂದರು.

ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ದೇವಾಲಯಗಳ ನಿರ್ಮಾಣದಿಂದ ಧಾರ್ಮಿಕ ಪ್ರಜ್ಞೆ ಬೆಳೆಯುತ್ತದೆ ಎಂದರು.

ವೇದಿಕೆಯಲ್ಲಿ ದೇವಾಲಯ ನಿರ್ಮಾಣ ಸಮಿತಿಯ ಅಧ್ಯಕ್ಷ ಎಂ.ಜಿ. ಮೂರ್ತಿ, ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ತಾ.ಪಂ. ಸದಸ್ಯೆ ಸವಿತಾ ಈರಪ್ಪ, ಗ್ರಾ.ಪಂ. ಅಧ್ಯಕ್ಷ ತಿಮ್ಮಯ್ಯ, ಸದಸ್ಯ ಎಂ.ಜೆ.ಭುವನ, ಪ್ರಮುಖರಾದ ಎಸ್.ಎಂ.ಡಿಸಿಲ್ವಾ, ಎಸ್.ಟಿ.ಗಣೇಶ್, ಬಾಚಿಹಳ್ಳಿ ಪ್ರತಾಪ್‍ಗೌಡ, ಕೊತ್ತನಳ್ಳಿ ಅರುಣ್, ಗಿರೀಶ್ ಮಲ್ಲಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು. ಸಮಿತಿ ಸದಸ್ಯ ಬಂಗೀರಮನೆ ಸತೀಶ್ ಸ್ವಾಗತಿಸಿದರು.