ಸೋಮವಾರಪೇಟೆ,ಮೇ.5: ಹಿಂದೂ ಧರ್ಮದ ಮೇಲೆ ಆಗುತ್ತಿರುವ ದೌರ್ಜನ್ಯ, ದುರಾ ಕ್ರಮಣಗಳ ವಿರುದ್ಧ ಸಂಘಟಿತವಾಗಿ ಹೋರಾಡಲು ಪ್ರತಿಯೊಬ್ಬ ಹಿಂದುವೂ ಕ್ಷಾತ್ರತೇಜದಿಂದ ಧರ್ಮ ರಕ್ಷಣೆಯ ಸಂಕಲ್ಪ ತೊಡಬೇಕು ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಸಂಚಾಲಕ ಪ್ರಮೋದ್ ಮುತಾಲಿಕ್ ಕರೆ ನೀಡಿದರು.
ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಹಿಂದೂ ಜನ ಜಾಗೃತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ವಿಶ್ವದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಲು ಎರಡು ಧರ್ಮಗಳೇ ಕಾರಣವಾಗಿವೆ. ಇಸ್ಲಾಂ ರಾಷ್ಟ್ರಗಳಲ್ಲೂ ಇಂದು ಶಾಂತಿ ಕದಡಿದೆ. ಸೌಮ್ಯಸ್ವಭಾವದಿಂದ ಇರುವ ಹಿಂದೂ ಸಮಾಜವನ್ನು ಕೆಣಕುವ ಕಾರ್ಯಕ್ಕೆ ಕ್ಷುದ್ರ ಶಕ್ತಿಗಳು ಕೈಹಾಕಿವೆ. ಹಿಂದೂಗಳಿಗೆ ಉಳಿದಿರುವದು ಇದೊಂದೇ ರಾಷ್ಟ್ರವಾಗಿದ್ದು, ಭಾರತವನ್ನು ಹಿಂದೂರಾಷ್ಟ್ರವಾಗಿ ಉಳಿಸಿಕೊಳ್ಳುವ ಕಾರ್ಯ ಆಗಬೇಕಿದೆ ಎಂದರು.
ಕಾಶ್ಮೀರದಲ್ಲಿದ್ದ ಹಿಂದೂಗಳನ್ನು ಅಲ್ಲಿಂದ ಓಡಿಸಿದ ನಂತರ ಇದೀಗ ಸೈನಿಕರ ಮೇಲೆ ಕಲ್ಲು ಎಸೆಯ ಲಾಗುತ್ತಿದೆ. ಈ ಕ್ರಮವನ್ನು ದೇಶದ ಒಳಗಿರುವ ಮುಸ್ಲಿಂ ಮುಖಂಡರು ಖಂಡಿಸುತ್ತಿಲ್ಲ; ಸೈನಿಕರ ಮೇಲೆ ಕಲ್ಲೆಸೆಯುವದನ್ನು ಸೈನಿಕರ ನಾಡು ಕೊಡಗು ಸಹಿಸಬಾರದು ಎಂದರು.
ಕೊಡಗು ಸೇರಿದಂತೆ ಕರ್ನಾಟಕ ದಲ್ಲೂ ಹಿಂದೂ ನಾಯಕರ, ಮುಖಂಡರ ಹತ್ಯೆಯಾಗುತ್ತಿದೆ. ಇವರುಗಳ ತ್ಯಾಗ ಬಲಿದಾನ ವ್ಯರ್ಥವಾಗಬಾರದು. 1964ರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕರ್ನಾಟಕ ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದೇ ಆದರೆ ಗೋರಕ್ಷಕರು ಬೀದಿಗಿಳಿಯುವ ಪ್ರಮೇಯ ಎದುರಾಗುತ್ತಿರಲಿಲ್ಲ ಎಂದು ಮುತಾಲಿಕ್ ಅಭಿಪ್ರಾಯಿಸಿದರು.
ಕೇಂದ್ರದಲ್ಲಿ ನರೇಂದ್ರ ಮೋದಿ ಆಡಳಿತ ನಡೆಸುತ್ತಿದ್ದು, ಉತ್ತರ ಪ್ರದೇಶದಲ್ಲಿ ಹಿಂದೂ ನಾಯಕ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಅಯೋಧ್ಯೆಯಲ್ಲಿ ಹಿಂದೂಗಳ ಸ್ವಾಭಿಮಾನದ ಪ್ರತೀಕವಾದ ರಾಮಮಂದಿರ ನಿರ್ಮಾಣವಾಗುವ ಸೂಚನೆ ಲಭಿಸಿದೆ ಎಂದು ಅವರು ನುಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಣರಾಗಿಣಿ ಸಂಸ್ಥೆಯ ಸಂಚಾಲಕಿ ಭವ್ಯಗೌಡ ಮಾತನಾಡಿ, ಹಿಂದೂ ಧರ್ಮಕ್ಕಾಗಿ ಜೀವನವನ್ನೇ ತ್ಯಾಗ ಮಾಡಿದ ಹಿಂದೂ ವನಿತೆಯರ ಆದರ್ಶಗಳನ್ನು ಮೈಗೂಢಿಸಿಕೊಳ್ಳ ಬೇಕು. ಹಿಂದೂ ಯುವತಿಯರು ಲವ್ಜಿಹಾದ್ ಬಗ್ಗೆ ಜಾಗೃತರಾಗ ಬೇಕು. ಮೊಬೈಲ್ ಅಂಗಡಿಗಳಲ್ಲಿ ಕರೆನ್ಸಿ ಹಾಕುವ ಸಂದರ್ಭ ಹಿಂದೂ ಯುವತಿಯರ ಮೊಬೈಲ್ ಸಂಖ್ಯೆಗಳು 500-1000 ರೂಪಾಯಿಗಳಿಗೆ ಮಾರಾಟವಾಗುತ್ತಿದ್ದು, ಈ ಬಗ್ಗೆ ಎಚ್ಚರವಹಿಸಬೇಕು ಎಂದರು.
ಸನಾತನ ಸಂಸ್ಥೆಯ ಸಂಚಾಲಕಿ ಸಿಂಧು ನವೀನ್ ಮಾತನಾಡಿ, ಹಿಂದೂ ಸಮಾಜದ ವಿದ್ಯಾರ್ಥಿಗಳಿಗೆ ಎಳೆಯ ವಯಸ್ಸಿನಲ್ಲಿಯೇ ಸಂಸ್ಕಾರ ಯುತ ಶಿಕ್ಷಣ ನೀಡಬೇಕು ಎಂದರು. ಮುಖ್ಯ ಅತಿಥಿಯಾಗಿದ್ದ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಅಭಿಮನ್ಯುಕುಮಾರ್ ಮಾತನಾಡಿ, ಹಿಂದೂ ಧರ್ಮದ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವ ಕಾರ್ಯ ಆಗಬೇಕಿದೆ ಎಂದರು.
ಹಿಂದೂ ಜನಜಾಗೃತಿ ಸಮಿತಿಯ ಬೆಂಗಳೂರು ವಿಭಾಗ ಸಂಚಾಲಕ ಮೋಹನ್ಕುಮಾರ್ ಗೌಡ ಮಾತನಾಡಿದರು. ಸಮಿತಿಯ ಪದಾಧಿಕಾರಿಗಳಾದ ಶಿವರಾಮು, ಸಂತೋಷ್ ರೈ ಸೇರಿದಂತೆ ಇತರರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.
ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಮಾಜೀ ಎಂಎಲ್ಸಿ ಎಸ್.ಜಿ. ಮೇದಪ್ಪ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯೆ ಪೂರ್ಣಿಮಾ ಗೋಪಾಲ್, ತಾ.ಪಂ. ಸದಸ್ಯೆ ಹೆಚ್.ಎನ್. ತಂಗಮ್ಮ ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸಿದ್ದರು.