ಮಡಿಕೇರಿ, ಮೇ 4: ಕೊಡಗು ಜಿಲ್ಲೆಯಲ್ಲಿರುವ ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ನ್ಯಾಯಾಂಗ ಆಡಳಿತದಲ್ಲಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೊಂದಿರಬೇಕಾದ ಅರ್ಹತೆ: ಸರ್ಕಾರಿ ಆದೇಶ ಸಂಖ್ಯೆ:ಎಸ್‍ಡಬ್ಲ್ಯೂಡಿ 150 ಬಿಸಿಎಂ 179/94 ರನ್ವಯ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ವರ್ಗ-1, 2ಎ, 3ಎ ಮತ್ತು 3 ಬಿಗೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ ರೂ. 2,50,000, ಹಿಂದುಳಿದ ವರ್ಗದ 2ಎ, 3ಎ ಮತ್ತು 3ಬಿ ಲಕ್ಷಕ್ಕೆ ಒಳಪಟ್ಟಿರಬೇಕು. ವರ್ಗ-1 ರ ಅಭ್ಯರ್ಥಿಗಳಿಗೆ ಆದಾಯ ಮಿತಿ ರೂ. 3,50,000 ಆಗಿರುತ್ತದೆ. ವರ್ಗ-1 ರ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವದು. ವರ್ಗ-1ರಲ್ಲಿ ಅರ್ಹ ಅಭ್ಯರ್ಥಿಗಳ ಕೊರತೆ ಇದ್ದಲ್ಲಿ ಸರ್ಕಾರದ ಆದೇಶದನ್ವಯ ನಿಯಮಾನುಸಾರ ಇತರ ವರ್ಗಗಳಲ್ಲಿ ಆಯ್ಕೆ ಮಾಡಲಾಗುವದು. ಅರ್ಜಿಯನ್ನು ಸ್ವೀಕರಿಸುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು ವಕೀಲರಾಗಿ ಕಾರ್ಯನಿರ್ವಹಿಸಲು ನಿಗದಿಪಡಿಸಲಾದ ಕಾನೂನು ಪರೀಕ್ಷೆಯಲ್ಲಿ ತೇರ್ಗಡೆಯಾಗಿ 2 ವರ್ಷದ ಒಳಗಿರುವವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
ಅಭ್ಯರ್ಥಿಯು ಗರಿಷ್ಠ ವಯೋಮಿತಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ 30 ವರ್ಷದೊಳಗಿರಬೇಕು ಹಾಗೂ ವರ್ಗ-1 ರ ಅಭ್ಯರ್ಥಿಗೆ 1 ವರ್ಷ ರಿಯಾಯಿತಿ ಇರುತ್ತದೆ. ಅಭ್ಯರ್ಥಿಯು ತನ್ನ ಹೆಸರನ್ನು ಬಾರ್ ಕೌನ್ಸಿಲ್‍ನಲ್ಲಿ ನೋಂದಾಯಿಸಿರಬೇಕು. ಕಾನೂನು ತರಬೇತಿಯು 4 ವರ್ಷಗಳ ಅವಧಿಯಾಗಿದ್ದು, ಪರಿಷ್ಕøತ ಆದೇಶದನ್ವಯ ಮಾಸಿಕ ರೂ. 2 ಸಾವಿರದಂತೆ ಶಿಷ್ಯವೇತನ ನೀಡಲಾಗುವದು. ಕಾನೂನು ತರಬೇತಿಯನ್ನು ಕೊಡಗು ಜಿಲ್ಲೆಯಿಂದ ಹಿಂದುಳಿದ ವರ್ಗಗಳ 6 ಅಭ್ಯರ್ಥಿಗಳಿಗೆ ತರಬೇತಿ ನೀಡಲು ಅವಕಾಶವಿರುತ್ತದೆ.
ಅರ್ಜಿ ನಮೂನೆಗಳನ್ನು ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ, ಮಡಿಕೇರಿ ಇಲ್ಲಿಂದ ಪಡೆದು ಆಗಸ್ಟ್ 31 ರೊಳಗೆ ಕಚೇರಿಗೆ ಸಲ್ಲಿಸುವದು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದೇವರಾಜ ಅರಸು ಭವನ, ಮ್ಯಾನ್ಸ್ ಕಾಂಪೌಂಡು ಹತ್ತಿರ, ಮಡಿಕೇರಿ ಇವರನ್ನು ಕಚೇರಿ ವೇಳೆಯಲ್ಲಿ ಹಾಗೂ ದೂ.ಸಂ:08272-225628 ನ್ನು ಸಂಪರ್ಕಿಸಬಹುದು.
ಪರಿಶಿಷ್ಟರಿಂದ ಅರ್ಜಿ ಆಹ್ವಾನ
ಮೂಲ ನಿವಾಸಿ ಪರಿಶಿಷ್ಟ ಪಂಗಡ, ಜೇನುಕುರುಬ ಹಾಗೂ ಕೊರಗ ಸಮುದಾಯದ ವಿದ್ಯಾವಂತ ಯುವಕ/ ಯುವತಿಯರಿಗೆ ಶೈಕ್ಷಣಿಕ ಪ್ರೋತ್ಸಾಹಧನ ಮತ್ತು ನಿರುದ್ಯೋಗಿಗಳಿಗೆ ಜೀವನ ಭತ್ಯೆ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಜೇನುಕುರುಬ ಮತ್ತು ಕೊರಗ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ. ರೂ. 10 ಸಾವಿರ, ಪಿ.ಯು.ಸಿ. ಮತ್ತು ತತ್ಸಮಾನ ಕೋರ್ಸ್‍ಗಳು (ಪ್ರತಿ ವರ್ಷಕ್ಕೆ) ರೂ. 12 ಸಾವಿರ, ಎಲ್ಲಾ ಪದವಿ ಕೋರ್ಸ್‍ಗಳು (ಪ್ರತಿ ವರ್ಷಕ್ಕೆ) ರೂ. 15 ಸಾವಿರ ಹಾಗೂ ಎಲ್ಲಾ ಸ್ನಾತಕೋತ್ತರ ಕೋರ್ಸ್‍ಗಳು ರೂ. 18 ಸಾವಿರ ಪ್ರೋತ್ಸಾಹ ಧನ ನೀಡಲಾಗುವದು.
ಷರತ್ತುಗಳು: ಅಭ್ಯರ್ಥಿಗಳು ವ್ಯಾಸಂಗ ಮಾಡುತ್ತಿರುವ ಬಗ್ಗೆ ಸಂಬಂಧಿಸಿದ ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಣ ಪತ್ರ ಲಗತ್ತಿಸುವದು. ಈ ಕೋರ್ಸ್‍ಗಳಲ್ಲಿ ಅಭ್ಯರ್ಥಿಗಳು ವ್ಯಾಸಂಗವನ್ನು ಮುಂದುವರಿಸದೇ ನಿಲ್ಲಿಸಿದಲ್ಲಿ ಅಂತಹ ಅಭ್ಯರ್ಥಿಗಳ ಶೈಕ್ಷಣಿಕ ಪ್ರೋತ್ಸಾಹ ಧನವನ್ನು ರದ್ದುಪಡಿಸಲಾಗುವದು. ಅಭ್ಯರ್ಥಿಗಳು ಅರ್ಜಿಯೊಂದಿಗೆ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸುವದು.
ಜೇನುಕುರುಬ ಮತ್ತು ಕೊರಗ ವಿದ್ಯಾವಂತ ಯುವಕ-ಯುವತಿಯರಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ರೂ. 2 ಸಾವಿರ, ಪಿ.ಯು.ಸಿ. ಮತ್ತು ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ರೂ. 2,500, ಎಲ್ಲಾ ಪದವಿ ಕೋರ್ಸ್‍ಗಳಲ್ಲಿ ತೇರ್ಗಡೆಯಾದವರಿಗೆ ರೂ. 3,500 ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್‍ಗಳಲ್ಲಿ ತೇರ್ಗಡೆಯಾದವರಿಗೆ ರೂ. 4,500 ನಿರುದ್ಯೋಗಿ ಜೀವನ ಭತ್ಯೆ ನೀಡಲಾಗುವದು.
ಷರತ್ತುಗಳು: ನಿರುದ್ಯೋಗ ಜೀವನ ಭತ್ಯೆಗೆ ಗರಿಷ್ಠ ವಯೋಮಿತಿ 40 ವರ್ಷದ ಒಳಗಿರತಕ್ಕದ್ದು. ನಿರುದ್ಯೋಗಿಯೆಂದು ನೋಟರಿಯಿಂದ ಅಫಿಡವಿಟ್‍ನ್ನು ಪಡೆದು ಬಯೋಡಾಟಾದೊಂದಿಗೆ ಸಲ್ಲಿಸತಕ್ಕದ್ದು. ಜೀವನ ಭತ್ಯೆಯನ್ನು ಸರ್ಕಾರ, ಖಾಸಗಿ, ಸ್ವಯಂ ಉದ್ಯೋಗಗಳಡಿ ಉದ್ಯೋಗ ದೊರಕಿದ ಅಥವಾ ಮೂರು ವರ್ಷಗಳ ಅವಧಿಗೆ ಯಾವದು ಮೊದಲು ಅಲ್ಲಿಯವರೆಗೆ ಮಾತ್ರ ಸೀಮಿತ. ಈ ಜೀವನ ಭತ್ಯೆಯನ್ನು ಪಡೆಯುವ ಅಭ್ಯರ್ಥಿಗಳು ಕೌಶಲಾಭಿವೃದ್ಧಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಡ್ಡಾಯವಾಗಿ ತರಬೇತಿ ಪಡೆಯತಕ್ಕದ್ದು. ನಿರುದ್ಯೋಗಿ ಜೀವನ ಭತ್ಯೆ ಮಂಜೂರಾತಿಗೆ ಅಭ್ಯರ್ಥಿಗಳ ವಿವರ, ಶೈಕ್ಷಣಿಕ ವಿದ್ಯಾರ್ಹತೆ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಅಫಿಡವಿಟ್ ದಾಖಲಾತಿಗಳನ್ನು ಸಲ್ಲಿಸುವದು.
ಯೋಜನಾ ಸಮನ್ವಯಾಧಿಕಾರಿಗಳು, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಕೊಡಗು ಜಿಲ್ಲೆ, ಮಡಿಕೇರಿ-08272-229983, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಪೊನ್ನಂಪೇಟೆ-08274-261261, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಮಡಿಕೇರಿ-08272-223552 ಹಾಗೂ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ-08276-281115 ಇಲ್ಲಿಂದ ಅರ್ಜಿ ಪಡೆದುಕೊಳ್ಳಬಹುದು.