ಕಾನೂನು ಕಟ್ಟಳೆಗಳು ಇರುವದು ಏತಕ್ಕೆ... ಇದು ಕೊಡಗಿನಲ್ಲಿ ಸದ್ಯದಮಟ್ಟಿಗೆ ಸೋಜಿಗದ ಪ್ರಶ್ನೆ... ಇಲ್ಲಿ ಯಾರು ಏನು ಬೇಕಾದರೂ ಮಾಡಬಹುದು... ಏನುಬೇಕಾದರೂ ಕೇಳಬಹುದು... ಹೇಳೋರೂ ಇಲ್ಲ, ಕೇಳೋರೂ ಇಲ್ಲ...
ಪುಟ್ಟ ಕೊಡಗು ಪ್ರಾಕೃತಿಕ ನೆಲೆಬೀಡು ಈ ಸಮೃದ್ಧಿಯ ನೆಲ ಇದೀಗ ಹತ್ತು ಹಲವಾರು ರೀತಿಯಲ್ಲಿ ಅತ್ಯಾಚಾರಕ್ಕೆ ಒಳಗಾಗುತ್ತಿದೆ. ಕೇವಲ 4,102 ಚದರ ಕಿ.ಮೀ. ಭೌಗೋಳಿಕ ವಿಸ್ತೀರ್ಣ ಹೊಂದಿರುವ ಜಿಲ್ಲೆಯಲ್ಲಿ 2011ರ ಜನಗಣತಿಯಂತೆ 5,54,762 ಜನಸಂಖ್ಯೆ ಇದೆ. ಎಲ್ಲರೂ ಹಾಡಿ ಹೊಗಳುವಂತೆ ಕೊಡಗು ಎಂದರೆ ಭೂಲೋಕದ ಸ್ವರ್ಗ... ಹೌದು ಸ್ವರ್ಗವೇನೋ ಸರಿ. ಆದರೆ ಈ ನೆಲ ಎಷ್ಟು ಒತ್ತಡವನ್ನು ಸಹಿಸಬಹುದು. ದೇಶದಲ್ಲಿ ಹುಟ್ಟಿದ ಪ್ರಜೆ ಎಲ್ಲಿಬೇಕಾದರೂ ಬದುಕುವ ಹಕ್ಕು ಇದೆ ಎಂಬದೇನೋ ನಿಜ. ಆದರೆ ಎಲ್ಲರಿಗೂ ಕೊಡಗಿನಲ್ಲಿ ಜಾಗ ಬೇಕೆಂದರೆ ಅದು ಹೇಗೆ ಸಾಧ್ಯ? ಬೆಟ್ಟಗುಡ್ಡಗಳು, ಅರಣ್ಯ ಪ್ರದೇಶ... ಅರಣ್ಯಕ್ಕೆ ಪೂರಕವೆಂಬಂತೆ ಇಲ್ಲಿನ ಕಾಫಿ ತೋಟ... ಏಲಕ್ಕಿ ತೋಟ ಇವೆಲ್ಲದರ ನಡುವೆ ತಲಾತಲಾಂತರದಿಂದ ಬದುಕು ಕಂಡುಕೊಂಡಿರುವ ಇಲ್ಲಿನ ಮೂಲ ನಿವಾಸಿಗಳೊಂದಿಗೆ ವನ್ಯಜೀವಿಗಳಿಗೂ ಕೊಡಗು ಅಚ್ಚು ಮೆಚ್ಚು... ಆದರೆ ಹಿಂದಿನ ವಾತಾವರಣ ಈಗಿದೆಯೇ... ಮನುಷ್ಯ ಅರಣ್ಯಕ್ಕೆ ನುಗ್ಗಿದರೆ ಅರಣ್ಯದ ಜೀವಿಗಳು ನಾಡಿಗೆ ಲಗ್ಗೆ ಇಡುತ್ತಿವೆ.
ದೇಶದ ಕಾನೂನಿನಂತೆ, ಅನಿವಾರ್ಯತೆಯೂ ಆಗಿರುವಂತೆ ಶೇ. 30 ರಷ್ಟು ಪ್ರದೇಶದಲ್ಲಿ ಅರಣ್ಯವಿರಬೇಕು. ಇದು ಎಲ್ಲಡೆ ಇದೆಯೇ... ಕೊಡಗಿನಲ್ಲಂತೂ ಇದೆ. ಇಲ್ಲಿನ ಅರಣ್ಯ ಈ ತನಕ ಅರಣ್ಯವಾಗಿಯೇ ಹಚ್ಚಹಸಿರಿನಿಂದ ಉಳಿದಿತ್ತು. ದೇವರ ಕಾಡಿನ ರೂಪದಲ್ಲೂ ಭಯಭಕ್ತಿಯಿಂದ ಪ್ರತಿ ಊರಿನಲ್ಲೂ ಅರಣ್ಯವನ್ನು ಸಂರಕ್ಷಿಸಿಕೊಂಡು ಬರಲಾಗಿತ್ತು. ಜನಸಂಖ್ಯೆಯ ಒತ್ತಡ ಕೊಡಗಿನಲ್ಲಿ ಇರಲಿಲ್ಲ. ಇದರಿಂದ ಪರಿಸರ ಸಹಜ ರೀತಿಯಲ್ಲೇ ಉಳಿದಿತ್ತು. ಆದರೆ ಇದೀಗ ಏನಾಗುತ್ತಿದೆ? ಪ್ರವಾಸಕ್ಕೆಂದು ಬಂದ ಶ್ರೀಮಂತರಿಗೆ ಇಲ್ಲಿನ ಪರಿಸರ ನೋಡಿ ಪ್ರೀತಿ ಉಕ್ಕಿ ಬರುತ್ತದೆ. ಅವರಿಗೂ ಇಲ್ಲಿ ಎಕರೆಗಟ್ಟಲೆ ಜಾಗ ಬೇಕು. ಪ್ರವಾಸಿ ತಾಣವಾಗಿ ಗುರುತಿಸಲ್ಪಟ್ಟಿರುವದರಿಂದ ದೊಡ್ಡ ದೊಡ್ಡ ಐಷಾರಾಮಿ ರೆಸಾರ್ಟ್ಗಳು ನಾಯಿಕೊಡೆಯಂತೆ ತಲೆ ಎತ್ತುತ್ತಿದ್ದು, ಕಂಪೆನಿಗಳಿಗೂ, ಉದ್ಯಮಿಗಳಿಗೂ ನೂರಾರು ಎಕರೆ ಜಾಗಬೇಕು. ಇವೆಲ್ಲದರ ನಡುವೆ ಸೂರಿಲ್ಲದ ಪಾಪದ ಮಂದಿಗೂ ಜಾಗ ಬೇಕು. ಈ ಮಣ್ಣಿನಲ್ಲಿ ಹುಟ್ಟಿ ಬೆಳೆದವರಿಗೂ ಇಲ್ಲೇ ನೆಲೆ ಅತ್ಯವಶ್ಯಕ. ಹೈಟೆನ್ಷನ್ ಮಾರ್ಗ, ರೈಲು ಮಾರ್ಗದಂತಹ ಅಭಿವೃದ್ಧಿ ಕೆಲಸಗಳೂ ಆಗಬೇಕು. ಇಂತಹ ಒತ್ತಡವನ್ನು ಪ್ರಾಕೃತಿಕ ನೆಲೆಗಟ್ಟಿನ ಪುಟ್ಟ ಪ್ರದೇಶ ಹೇಗೆ ತಾನೇ ಸಹಿಸಿಕೊಳ್ಳಬೇಕು. ವಿಶಾಲ ಭಾರತದ ಪುಟ್ಟ ಜಿಲ್ಲೆಯಲ್ಲೇ ಎಲ್ಲರೂ ಬದುಕಬೇಕೆಂದರೆ ಅದು ಹೇಗೆ ಸಾಧ್ಯ? ಇಲ್ಲಿನ ಮೂಲ ನಿವಾಸಿಗಳು ವಲಸೆ ಹೋಗಲು ಸಾಧ್ಯವಿದೆಯೇ ಅಥವಾ ಇರುವ ಕಾನೂನು ಕಟ್ಟಳೆಗಳನ್ನು ಮುರಿದು ಅರಣ್ಯವನ್ನು ಬೋಳುಮಾಡಿ ಎಲ್ಲರಿಗೂ ಕೊಡಗಿನಲ್ಲಿ ನೆಲೆ ಒದಗಿಸಲು ಸಾಧ್ಯವಿದೆಯೇ... ಜಮ್ಮಾ ಜಾಗ, ರೆವಿನ್ಯೂ ಲ್ಯಾಂಡ್, ಪೈಸಾರಿ, ಫಾರೆಸ್ಟ್ ಲ್ಯಾಂಡ್ ಎಂಬ ಹಲವು ವಿಧದ ಭೂ ನಿಬಂಧನೆ ಇದ್ದೇ ಇವೆ. ಇದನ್ನು ಅದಕ್ಕೆ ತಕ್ಕಂತೆ ಉಳಿಸಲು ಬಳಸಿಕೊಳ್ಳಲು ಕಾನೂನಾತ್ಮಕ ಅಂಶಗಳಿಲ್ಲವೇ? ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವವರು ಯಾರು ಎಂಬದು ಪ್ರಶ್ನೆಯಾಗಿದೆ. ಜಿಲ್ಲಾಡಳಿತ, ಜನಪ್ರತಿನಿಧಿಗಳು ಒತ್ತಡದಲ್ಲಿರುವದಂತೂ ದಿಟ. ಒತ್ತಡ... ಗೊಂದಲ... ಮುಂಬರಲಿರುವ ಚುನಾವಣೆಯ ದೃಷ್ಟಿಕೋನದಿಂದ ದಿನೇ ದಿನೇ ಜಿಲ್ಲೆಯಲ್ಲಿನ ಪರಿಸ್ಥಿತಿ ಬಿಗಡಾಯಿಸುತ್ತಿದೆ. ವಸ್ತುಸ್ಥಿತಿಯನ್ನು ಅರಿತು ನಡೆಯದಿದ್ದರೆ ಪಾಲೆಮಾಡು, ಚೆರಿಯಪರಂಬು, ದಿಡ್ಡಳ್ಳಿಯಂತಹ ಇನ್ನೂ ಹತ್ತಾರು ಘಟನೆಗಳು ಹುಟ್ಟಿಕೊಳ್ಳದೆ ಇರಲಾರವು.
-ಶಶಿ ಸೋಮಯ್ಯ