ಕುಶಾಲನಗರ, ಮೇ 4: ದುಬಾರೆ ಸಾಕಾನೆ ಶಿಬಿರದಲ್ಲಿ ಸಾಕಾನೆ ಧಾಳಿಗೆ ಒಳಗಾಗಿ ಮಾವುತನೊಬ್ಬ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ. ಶಿಬಿರದ ಮಾವುತ ಮಣಿ (22) ಎಂಬಾತ ಮೃತ ದುರ್ದೈವಿ. ಕಳೆದ 1 ತಿಂಗಳ ಅವಧಿಯಲ್ಲಿ ಕಾರ್ತಿಕ್ ಎಂಬ ಸಾಕಾನೆಗೆ ಎರಡನೇ ಮಾವುತನ ಬಲಿ ಆದಂತಾಗಿದೆ. ಸಾಕಾನೆ ಕಾರ್ತಿಕ್ ಮಾವುತ ನಾಗಿರುವ ಮಣಿ ಸಂಜೆ ವೇಳೆ ಆಹಾರ ನೀಡಲು ತೆರಳಿದ ಸಂದರ್ಭ ಈ ಘಟನೆ ಸಂಭವಿಸಿದೆ. ಮಣಿಗೆ ಕಾರ್ತಿಕ್ ತಿವಿದ ಹಿನ್ನೆಲೆಯಲ್ಲಿ ತೀವ್ರ ಗಾಯ ಗೊಂಡು ಸ್ಥಳದಲ್ಲೇ ಮೃತಪಟ್ಟಿರು ವದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಅರಣ್ಯ ವಲಯಾಧಿಕಾರಿ ನೆಹರು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಚಿಣ್ಣಪ್ಪ, ತಾ.ಪಂ. ಸದಸ್ಯ ಚಂಗಪ್ಪ, ಗ್ರಾ.ಪಂ. ಸದಸ್ಯ ನವೀನ್ ಭೇಟಿ ನೀಡಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಇತ್ತೀಚೆಗಷ್ಟೆ ಕಾರ್ತಿಕ್ (8) ಆನೆ ಅಣ್ಣು ಎಂಬ ಮಾವುತನನ್ನು ತಿವಿದು ಸಾಯಿಸಿರುವ ಪ್ರಕರಣ ಹಸಿರಾಗಿರುವಾಗಲೇ ಈ ಘಟನೆ ಸಂಭವಿಸಿದೆ. ಮಣಿ ಪತ್ನಿ ಮತ್ತು ಅತ್ತೆಯನ್ನು ಅಗಲಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಸಿದ್ದಾಪುರಕ್ಕೆ ಸಾಗಿಸಲಾಯಿತು.