ಮಡಿಕೇರಿ, ಮೇ 4: ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಮ್ಮಿಯಾಲ ಹಾಗೂ ಮುಟ್ಲು ಗ್ರಾಮಗಳಲ್ಲಿರುವ ಎರಡು ಅಂಗನವಾಡಿಗಳ ದುರಸ್ತಿ ಲೆಕ್ಕದಲ್ಲಿ ತಲಾ ರೂ. 50 ಸಾವಿರದಂತೆ ಒಂದು ಲಕ್ಷ ಮೊತ್ತ ಗುಳುಂ ಮಾಡಿರುವ ಸಂಗತಿ ಬಹಿರಂಗಗೊಂಡಿದೆ.ಮಡಿಕೇರಿ ತಾಲೂಕು ಪಂಚಾಯಿತಿಯಿಂದ ಮೇಲಿನ ಎರಡು ಅಂಗನವಾಡಿಗಳಿಗೆ ತಲಾ ರೂ. 50 ಸಾವಿರ ಬಿಡುಗಡೆ ಗೊಳಿಸಿದ್ದು, ಸಂಬಂಧಪಟ್ಟ ಇಲಾಖೆಯಿಂದ ಅನುಮೋದನೆ ಯೊಂದಿಗೆ ಅನುದಾನ ಬಳಕೆ ಯಾಗಿರುವ ದಾಖಲೆ ಒದಗಿಸಲಾಗಿದೆ. ಆದರೆ ನೈಜವಾಗಿ ಈ ಎರಡು ಅಂಗನವಾಡಿಗಳ ಕಿಟಕಿ, ಬಾಗಿಲುಗಳ ದುರಸ್ತಿ ಸೇರಿದಂತೆ ಮೇಲ್ಛಾವಣಿ ಕೆಲಸ ಕೂಡ ನಡೆದಿಲ್ಲ. ಬದಲಾಗಿ ಹಳೆಯ ಹೆಂಚುಗಳನ್ನು ಅದೇ ಕಟ್ಟಡಕ್ಕೆ ಜೋಡಿಸಿ, ಗಾಳಿಗೆ ಹಾರದಂತೆ ಅಡ್ಡಪಟ್ಟಿ ಅಳವಡಿಸಿರುವ ದೃಶ್ಯ ಗೋಚರಿಸಿದೆ. ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.