ಚೆಟ್ಟಳ್ಳಿ, ಮೇ 5: ದುಬಾರೆಯ ಆನೆ ಶಿಬಿರದಲ್ಲಿ ನಾಲ್ಕು ತಿಂಗಳ ಹಿಂದೆ ಕೊಡಗಿನ ಹಲವೆಡೆ ಪುಂಡಾಟಿಕೆ ತೋರುತ್ತಿದ್ದ ಕಾಡಾನೆಗಳನ್ನು ಹಿಡಿದು ರಾಮ, ಲಕ್ಷ್ಮಣ, ಲವ ಹಾಗೂ ಕುಶನೆಂದು ಹೆಸರಿಟ್ಟು ಪಳಗಿಸಿ ದುಬಾರೆ ಆನೆಶಿಬಿರದ ಆನೆಗಳೊಂದಿಗೆ ಸೇರಿಸಲಾಗುತ್ತಿದೆ.

ಕಳೆದ ನಾಲ್ಕುತಿಂಗಳಲ್ಲಿ ಚೆಟ್ಟಳ್ಳಿಯ ಹಾಗೂ ಸಿದ್ದಾಪುರ ಸುತ್ತಲಿನ ನಾಲ್ಕು ಆನೆಗಳನ್ನು ಹಿಡಿಯಲು ಅರಣ್ಯ ಇಲಾಖಾಧಿಕಾರಿ, ಮಾವುತರು, ಕಾವಾಡಿಗಳು ಹಾಗೂ ನುರಿತ ಆನೆಗಳ ಸಹಾಯದಿಂದ ಹಗಲಿರುಳು ಕಾರ್ಯಾಚರಣೆ ನಡೆಸಿ ಆನೆಗಳನ್ನು ದುಬಾರೆ ಶಿಬಿರಕ್ಕೆ ಸಾಗಿಸಿದ್ದರು. ರಾಮ, ಲಕ್ಷ್ಮಣ, ಲವ, ಕುಶ ಎಂದು ನಾಮಕರಣವನ್ನಿಟ್ಟು ಆನೆಗಳಿಗೆ ಪಾಠ ಕಲಿಸಲಾಗಿತ್ತು. ಕಳೆದೆರಡು ವಾರಗಳ ಹಿಂದೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ, ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ ಚಿಣ್ಣಪ್ಪ, ವಲಯ ಅರಣ್ಯಾಧಿಕಾರಿ ಕೊಚ್ಚೇರ ನೆಹರು, ಉಪವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್ ಇಲಾಖಾ ಸಿಬ್ಬಂದಿಗಳ ನೇತೃತ್ವದಲ್ಲಿ ಶಿಬಿರದ ಆನೆಗಳ ಸಹಾಯದಿಂದ ಆನೆಗಳಿಗೆ ಸರಪಣಿ ಹಾಗೂ ಹಗ್ಗವನ್ನು ಬಿಗಿದು ನುರಿತ ಆನೆಗಳ ನಿಯಂತ್ರಣದಲ್ಲಿ ಸ್ಕ್ರಾಲ್ ನಿಂದ ಹೊರತರಲಾಯಿತು.

ರಾಮ, ಲಕ್ಷ್ಮಣ, ಲವ, ಕುಶರು ಯಾವದೇ ಪುಂಡಾಟಿಕೆ ತೋರದೆ ಒಗ್ಗಿಕೊಳ್ಳುತಿದ್ದು ಹಂತ ಹಂತವಾಗಿ ತರಬೇತಿ ನೀಡಲಾಗುತ್ತಿದೆ. ಹೊಳೆಯಲ್ಲಿ ಮಜ್ಜನ ಹಾಗೂ ಶಿಬಿರದ ಆಹಾರವನ್ನು ಸೇವಿಸುತ್ತಾ ಒಗ್ಗಿಕೊಳ್ಳತೊಡಗಿವೆ. ಕಳೆದೆರಡು ವಾರಗಳ ಹಿಂದೆ ದುಬಾರೆ ಆನೆ ಶಿಬಿರದಲ್ಲಿ ಮಾವುತನನ್ನು ಕೊಂದು ಹಾಕಿದ ಘಟನೆಯ ಹಿನ್ನೆಲೆ ಮಾವುತರಿಗೆ ಆನೆಗಳ ಬಗ್ಗೆ ಹೆಚ್ಚಿನ ನಿಗಾವಹಿಸಲು ಸೂಚಿಸಲಾಗಿದೆಂದು ಅರಣ್ಯ ಅಧಿಕಾರಿಗಳು ತಿಳಿದ್ದಾರೆ.

-ಪುತ್ತರಿರ ಕರುಣ್ ಕಾಳಯ್ಯ