ಮಡಿಕೇರಿ, ಮೇ. 4: ಸ್ವಚ್ಛ ಭಾರತ ಅಭಿಯಾನದಡಿ ನಗರಸಭೆಯಿಂದ ಅಲ್ಲಲ್ಲಿ ಗೋಡೆ ಬರಹಗಳೊಂದಿಗೆ ಸಚಿತ್ರ ಸಹಿತ ಅರಿವು ಮೂಡಿಸುವ ಪ್ರಯತ್ನ ನಡೆದಿದ್ದು, ಇಂದು ಇಲ್ಲಿನ ಅಂಚೆ ಕಚೇರಿ ಹಾಗೂ ಗಾಂಧಿ ಮೈದಾನದ ಬಳಿ ತಡೆಗೋಡೆಗಳಲ್ಲಿ ವಿಭಿನ್ನ ಚಿತ್ರ-ಬರಹಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವೆಂದಾದರೆ, ದಿನಗೂಲಿಗಳಿಗೆ ಸರಿಯಾಗಿ ಮಾಸಿಕ ಸಂಬಳವಿಲ್ಲದೆ ಪರದಾಡುತ್ತಿದ್ದಾರೆ.

ಪೌರಾಯುಕ್ತೆ ಶುಭ ಅವರ ಬಳಿ ಮಾಹಿತಿ ಬಯಸಿದಾಗ ರೂ. 6.18 ಲಕ್ಷ ವೆಚ್ಚದಲ್ಲಿ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮಕ್ಕೆ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು. ಕೇವಲ ಗೋಡೆಗಳಲ್ಲಿ ಚಿತ್ರ ಅಥವಾ ಬರಹಗಳಿಂದ ಅರಿವು ಮಾತ್ರವಲ್ಲದೆ, ನಗರದ 23 ವಾರ್ಡ್‍ಗಳಲ್ಲಿ ಗೃಹಿಣಿಯರಿಂದ ಸ್ವಚ್ಛತಾ ಜಾಗೃತಿ ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸುವದಾಗಿ ವಿವರಿಸಿದರು.

ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ ಕುರಿತು ಪ್ರಬಂಧ ಸ್ಪರ್ಧೆ, ಬೀದಿ ನಾಟಕ ಇತ್ಯಾದಿ ವಿಭಿನ್ನ ಚಟುವಟಿಕೆಗಳನ್ನು ಕೈಗೊಂಡು, ಮಹಿಳೆಯರು ಸ್ವಚ್ಛತೆಗೆ ಒತ್ತು ನೀಡುವತ್ತ ಬೀದಿಗಳಿಗೆ ಕಸ ಹಾಕದಂತೆ ಆದ್ಯತೆ ನೀಡುವತ್ತಲೂ ಪ್ರೇರೇಪಿಸಲಾಗುವದು ಎಂದು ಕಾರ್ಯಕ್ರಮದ ಉದ್ದೇಶ ತಿಳಿಸಿದರು. ಇನ್ನೊಂದೆಡೆ ಜನಪ್ರತಿನಿಧಿಗಳು, ಅಧಿಕಾರಿಗಳು, ಪೌರಕಾರ್ಮಿಕರು ಪರಸ್ಪರ ಸಂಬಂಧ ಅಥವಾ ಹೊಂದಾಣಿಕೆಯಿಲ್ಲದೆ ಹಳಿ ತಪ್ಪಿದ ರೈಲಿನಂತಾಗಿದ್ದಾರೆ!

ಸಂಬಳ ಇಲ್ಲ - ಕಸ ತೆಗೆಯುತ್ತಿಲ್ಲ!

ಒಂದೆಡೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗೋಡೆ ಬರಹಕ್ಕೆ ‘ಸ್ವಚ್ಛ ಭಾರತ’ ಅಭಿಯಾನ ಸೀಮಿತಗೊಳ್ಳುತ್ತಿದ್ದರೆ, ಮಡಿಕೇರಿ ನಗರದ ಹಾದಿ ಬೀದಿ ಸಹಿತ ಮುಖ್ಯ ಪಟ್ಟಣದ ತೋಡು ಕಸದ ರಾಶಿಯೊಂದಿಗೆ ಬಿಸಿಲಿನ ತಾಪದಿಂದ ಗಬ್ಬುನಾರತೊಡಗಿದೆ. ಕೆಲವೆಡೆ ತೊಟ್ಟಿಗಳಲ್ಲಿ ರಾಶಿ ರಾಶಿ ಕಸವನ್ನು ಅಕ್ಕಪಕ್ಕದವರೆ ಸುಟ್ಟು ಹಾಕುತ್ತಿದ್ದಾರೆ. ಇಂತಹ ಪರಿಸ್ಥಿತಿಗೆ ಕಾರಣ ನಗರಸಭೆ ಅಧಿಕಾರಿಗಳು ಹಾಗೂ ಸದಸ್ಯರ ಕಾರ್ಯವೈಖರಿ. ಈ ಮಂದಿ ಜನಸೇವೆ ಬದಲು ಸ್ವಂತ ಲಾಭದ ಲೆಕ್ಕಾಚಾರದಲ್ಲಿದ್ದಾರೆ ಎಂದು ನಾಗರಿಕರ ಆಕ್ರೋಶ.

ಒಂದೆಡೆ ನಗರಸಭೆಯ ಪೌರ ಕಾರ್ಮಿಕರು, ಇನ್ನೊಂದೆಡೆ ಸ್ತ್ರೀ ಶಕ್ತಿ ಸ್ಥಳೀಯ ಗುಂಪು ಮತ್ತೊಂದೆಡೆ ಬೆಂಗಳೂರು ಮೂಲದ ಖಾಸಗಿ ಏಜೆನ್ಸಿಯಿಂದ ಮೂರು ದಿಕ್ಕಿನಲ್ಲಿ ಸ್ವಚ್ಛತಾ ಕಾರ್ಯಕ್ಕೆ ಮಾಸಿಕ ಲಕ್ಷಾಂತರ ರೂಪಾಯಿ ವ್ಯಯವಾಗುತ್ತಿದ್ದು, ಈ ಹಣ ದುಡಿಯುವವರಿಗೆ ಲಭಿಸದೆ ಮಧ್ಯವರ್ತಿಗಳು ಹಾಗೂ ಭ್ರಷ್ಟ ಆಡಳಿತ ಮಂದಿಯ ಪಾಲಾಗುತ್ತಿದೆ ಎಂದು ದಿನಗೂಲಿಗಳ ಅಳಲು.

-ಶ್ರೀಸುತ