*ಗೋಣಿಕೊಪ್ಪಲು: ಹೈಸೊಡ್ಲೂರು ಬಿರುನಾಣಿ ಸಂಪರ್ಕ ರಸ್ತೆ ಕಾಮಗಾರಿ 4 ವರ್ಷಗಳಿಂದ ಪ್ರಗತಿ ಕಾಣದೆ ನೆನೆಗುದಿಗೆ ಬಿದ್ದಿದ್ದನ್ನು ಪ್ರಶ್ನಿಸಿ ಗ್ರಾಮಸ್ಥರು ಶಾಸಕ ಕೆ.ಜಿ. ಬೋಪಯ್ಯ ಸಮ್ಮುಖದಲ್ಲಿ ಗುತ್ತಿಗೆದಾರ ರಾಜೇಂದ್ರ ಅವರನ್ನು ಮುತ್ತಿಗೆ ಹಾಕಿ ಪ್ರತಿಭಟಿಸಿ ತೀವ್ರ ತರಾಟೆಗೆ ತೆಗೆದುಕೊಂಡರು.

ಪ್ರಧಾನಮಂತ್ರಿ ಗ್ರಾಮಸಡಯೋಜನೆಯ ರೂ. 8.5 ಕೋಟಿ ಅನುದಾನದಲ್ಲಿ 8.5 ಕಿ.ಮೀ ರಸ್ತೆ ಹಾಗೂ ಸೇತುವೆ ನಿರ್ಮಾಣದ ಕಾಮಗಾರಿ ಕಳೆದ 2013ರಲ್ಲಿ ರಾಜೇಂದ್ರ ಗುತ್ತಿಗೆ ಪಡೆದು ಕೊಂಡಿದ್ದರು. ಆದರೆ ಕಾಮಗಾರಿ ನಿರ್ವಹಿಸುವ ಕಾರ್ಯಪಾಲಕ ಅಭಿಯಂತರ ಯೋಜನಾ ವಿಭಾಗಾಧಿಕಾರಿ ಅಶೋಕ್ ರೆಡ್ಡಿ ಕ್ ಹಾಗೂ ಗುತ್ತಿಗೆದಾರ ರಾಜೇಂದ್ರ ನಡುವಿನ ಮನಃಸ್ತಾಪದಿಂದಾಗಿ ಕಾಮಗಾರಿಗೆ ತಡೆಯಾಗಿದೆ ಎನ್ನಲಾಗಿದೆ. ಇದನ್ನು ಪ್ರಶ್ನಿಸಿ ಗ್ರಾಮಸ್ಥರು ಅಧಿಕಾರಿ ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಸರಕಾರದ ಅನುದಾನ ಸದ್ಭಳಕೆ ಮಾಡದೆ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಶಾಸಕರಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.

ಕಳೆದ 4 ವರ್ಷಗಳ ಹಿಂದೆ ಕಾಮಗಾರಿಗೆ ಚಾಲನೆ ನೀಡಿದರೂ ಪೂರ್ಣ ಹಂತ ತಲುಪಿಲ್ಲ. ಗುತ್ತಿಗೆದಾರ ರಾಜೇಂದ್ರ ಕಳಪೆ ಕಾಮಗಾರಿ ನಡೆಸಿ ವಂಚಿಸುತ್ತಿದ್ದಾರೆ. ಗ್ರಾಮಸ್ಥರು

(ಮೊದಲ ಪುಟದಿಂದ) ಈ ಬಗ್ಗೆ ಪ್ರಶ್ನಿಸಿದರೆ ಉಡಾಫೆಯಿಂದ ಉತ್ತರಿಸಿ ಅಹಂ ಮನೋಭಾವ ತೋರುತ್ತಾರೆ. ಕಳಪೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ಕಾರ್ಯಪಾಲಕ ಅಬಿಯಂತರರು ಪ್ರಶ್ನಿಸಿದರೆ ಅವರ ಮೇಲೆ ಲಂಚದ ಆರೋಪ ಹೊರಿಸುತ್ತಾರೆ. ಹೀಗಾಗಿ ಅಭಿಯಂತರ ಹಾಗೂ ಗುತ್ತಿಗೆದಾರರ ನಡುವಿನಲ್ಲಿ ಮನಃಸ್ತಾಪಕ್ಕೆ ಕಾರಣವಾಗಿದೆ ಎಂದು ಕಾಫಿ ಮಂಡಳಿ ಸದಸ್ಯ ಬೊಟ್ಟೆಂಗಡ ರಾಜು ಆರೋಪಿಸಿದರು.

ಇದಕ್ಕೆ ಧ್ವನಿಗೂಡಿಸಿದ ಗ್ರಾಮಸ್ಥರು ಗುತ್ತಿಗೆದಾರ ರಾಜೇಂದ್ರ ಅವರ ನಡೆ ನುಡಿಯಲ್ಲಿ ವಿನಯತೆ ಇಲ್ಲ. ಸರಕಾರದ ಯೋಜನೆಗಳನ್ನು ಗುಣಮಟ್ಟದಲ್ಲಿ ಪೂರ್ಣಗೊಳಿಸಲು ನಿರ್ಲಕ್ಷ್ಯ ತೋರುತ್ತಾರೆ ಎಂದು ದೂರಿದರು.

ಕಾಮಗಾರಿ ವಿಚಾರವಾಗಿ ಗ್ರಾಮಸ್ಥರು ಗುತ್ತಿಗೆದಾರನಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುವ ಸೌಜನ್ಯವು ಇಲ್ಲ. ಕಾಮಗಾರಿಯಲ್ಲಿ ಗುಣಮಟ್ಟ ಇಲ್ಲ ಎಂದು ಆರೋಪಿಸಿದರೆ ಅವರ ಮೇಲೆಯೇ ಆರೋಪ ಹೊರಿಸುವ ತಂತ್ರಗಾರಿಕೆ ಗುತ್ತಿಗೆದಾರನದು. ಕಾಮಗಾರಿ ಏಕೆ ನಡೆಯುತ್ತಿಲ್ಲ ಎಂದು ಕೇಳಿದರೆ ಎಂಜಿನಿಯರ್‍ಗಳಿಗೆ ಲಂಚ ನೀಡಬೇಕಾಗಿದೆ. ಎಂಜಿನಿಯರ್‍ಗಳು ಕೇಳಿದಷ್ಟು ಹಣ ನೀಡದೆ ಇರುವದರಿಂದ ಕಾಮಗಾರಿ ನಡೆಸಲು ಅನುಮತಿ ನೀಡುತ್ತಿಲ್ಲ ಎಂದು ಗುತ್ತಿಗೆದಾರ ರಾಜೇಂದ್ರ ಆರೋಪಿಸುತ್ತಾರೆ. ಈ ಬಗ್ಗೆ ಎಂಜಿನಿಯರ್‍ಗಳಲ್ಲಿ ಪ್ರಶ್ನಿಸಿದರೆ ನಾವು ಲಂಚದ ಆಮಿಷ ಒಡ್ಡಿಲ್ಲ ಎಂದು ಹೇಳುತ್ತಾರೆ. ಒಟ್ಟಾರೆ ಇಬ್ಬರಲ್ಲಿಯೂ ಹೊಂದಾಣಿಕೆ ಇಲ್ಲದಿರುವದೆ ಕಾಮಗಾರಿ ವಿಳಂಬವಾಗಲು ಕಾರಣ ಎಂದು ಗ್ರಾಮಸ್ಥರು ಶಾಸಕರ ಗಮನಕ್ಕ ತಂದರು.

ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಶಾಸಕ ಕೆ.ಜಿ. ಬೋಪಯ್ಯ ಗುತ್ತಿಗೆದಾರರನ್ನು ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಾಮಗಾರಿ ನಡೆಸದೆ ನಿರ್ಲಕ್ಷ್ಯ ತೋರಿದ ಕಾರಣ ಗುತ್ತಿಗೆದಾರನ ವಿರುದ್ದ ಕ್ರಿಮಿನಲ್ ದೂರು ದಾಖಲಿಸುವದಾಗಿ ತಿಳಿಸಿದರು.

ಅಧಿಕಾರಿ ಹಾಗೂ ಗುತ್ತಿಗೆದಾರ ತಮ್ಮ ನಡುವಿನ ವೈಮನಸ್ಸನ್ನು ಬಿಟ್ಟು ಒಂದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವದು. ಕಾಮಗಾರಿ ನಡೆಯುವವರೆಗೆ ಮಂಗಳೂರು-ಕೊಡಗು ಕಾರ್ಯಪಾಲಕ ಅಭಿಯಂತರ ಯೋಜನಾಧಿಕಾರಿ ರಾಜೇಂದ್ರ ಮತ್ತು ಜಿಲ್ಲಾ ಸಹಾಯಕ ಕಾರ್ಯಪಾಲ ಅಭಿಯಂತರ ಹರೀಶ್ ವಾರದಲ್ಲಿ 2 ದಿನಗಳಂತೆ ಕಾಮಗಾರಿ ಪರಿಶೀಲನೆ ನಡೆಸಬೇಕೆಂದು ಸೂಚಿಸಿದರು.

ಬಿ.ಜೆ.ಪಿ. ತಾಲೂಕು ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್, ತಾಲೂಕು ಫೆಡರೇಷನ್ ಉಪಧ್ಯಕ್ಷ ಮಲ್ಲಂಡ ಮಧು, ಜಿಲ್ಲಾ ಬಿ.ಜೆ.ಪಿ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ಬಿರುನಾಣಿ ಗ್ರಾ.ಪಂ. ಅಧ್ಯಕ್ಷ ಅಣ್ಣಳಮಾಡ ರಾಯ್ ಚಿಣ್ಣಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಬೆಂಗಳೂರು ವಿಭಾಗ ಮುಖ್ಯ ಕಾರ್ಯಪಾಲಕ ಅಭಿಯಂತರ ಶಿವಶಂಕರ್, ಮಂಗಳೂರು ವಿಭಾಗ ಕಾರ್ಯಪಾಲಕ ಅಭಿಯಂತರ ರಾಜೇಂದ್ರ, ಜಿಲ್ಲಾ ಕಾರ್ಯಪಾಲಕ ಅಭಿಯಂತರ ಹರೀಶ್, ತಾಲೂಕು ಕಾಮಗಾರಿ ಪರಿಶೀಲನಾ ಅಧಿಕಾರಿ ಅಶೋಕ್ ರೆಡ್ಡಿ ಹಾಜರಿದ್ದರು.

ಕೆಜಿಬಿ ಆಕ್ರೋಶ

ಅಧಿಕಾರಿಗಳಿಂದ ಹಣ ಪಡೆದು ಸಾರ್ವಜನಿಕ ಸೇವೆ ಮಾಡಬೇಕಾದ ಅನಿವಾರ್ಯತೆ ನನಗಿಲ್ಲ. ಅಂತಹ ಕೆಳಮಟ್ಟದ ಶಾಸಕ ನಾನಲ್ಲ ಎಂದು ಕೆ.ಜಿ. ಬೋಪಯ್ಯ ಖಡಕ್ಕಾಗಿ ಸಾರ್ವಜನಿಕರ ಮುಂದೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಗುತ್ತಿಗೆದಾರ ರಾಜೇಂದ್ರ ಶಾಸಕರಿಗೆ ಹಣ ನೀಡಿದ್ದಾನೆ ಎಂಬ ಆರೋಪ ವಿರೋಧ ಬಣದವರಿಂದ ಕೇಳಿಬರುತ್ತಿತ್ತು. ಈ ಮಾತು ಕೇಳಿದ ಶಾಸಕರು ಆಕ್ರೋಶಿತರಾಗಿ ಈ ಮಾತನ್ನು ಹೇಳಿದರು.

ಇದಕ್ಕೆ ಗುತ್ತಿಗೆದಾರ ರಾಜೇಂದ್ರ ಶಾಸಕರಿಗೆ ನಾನು ಹಣ ನೀಡಿಲ್ಲ. ಇದು ಸುಳ್ಳುಸುದ್ದಿ. ಆದರೆ ಇಂಜಿನಿಯರ್, ಅಧಿಕಾರಿಗಳು ನನ್ನಲ್ಲಿ ಹಣಕ್ಕಾಗಿ ಪೀಡಿಸುತ್ತಿದ್ದಾರೆ. ಇದು ಸತ್ಯ ಎಂದು ಹೇಳಿದರು.

ಚಿತ್ರ ವರದಿ: ಎನ್.ಎನ್ ದಿನೇಶ್