ಸೋಮವಾರಪೇಟೆ, ಏ. 16: ಸಮಾಜದಲ್ಲಿ ನೈತಿಕತೆ, ಮಾನವೀಯ ಮೌಲ್ಯಗಳು ಮರೆಯಾಗುತ್ತಿದ್ದು, ಸ್ವಾತಂತ್ರ್ಯದ ದುರ್ಬಳಕೆ ಹೆಚ್ಚುತ್ತಿದೆ ಎಂದು ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪರಶುರಾಮ್ ದೊಡ್ಡಮನಿ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖಾ ವತಿಯಿಂದ ಇಲ್ಲಿನ ಸ್ತ್ರೀ ಶಕ್ತಿ ಭವನದಲ್ಲಿ ಆಯೋಜಿಸಲಾಗಿದ್ದ ಕಾನೂನು ಸಾಕ್ಷರತಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೃಶ್ಯವಾಹಿನಿಗಳಲ್ಲಿ ಕ್ರೌರ್ಯವನ್ನು ಬಿಂಬಿಸುವಂತಹ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ವೀಕ್ಷಿಸುವವರಿಂದ ಅಪರಾಧ ಪ್ರಕರಣಗಳು ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಮಾತೆಯರು ತಮ್ಮ ಮಕ್ಕಳಿಗೆ ಪ್ರಾರಂಭದಲ್ಲಿಯೇ ಮಾನವೀಯ ಮೌಲ್ಯಗಳ, ಸಂಸ್ಕಾರಯುತ ಶಿಕ್ಷಣವನ್ನು ನೀಡಲು ಮುಂದಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಮಾತನಾಡಿ, ಮಹಿಳೆಯರ ಸಂರಕ್ಷಣೆಗೆ ದೇಶದಲ್ಲಿ ಅನೇಕ ಕಾನೂನುಗಳಿದ್ದರೂ ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳದಂತಹ ಪ್ರಕರಣಗಳು ಇನ್ನೂ ಕಡಿಮೆಯಾಗದೇ ಇರುವದು ದುರಂತ ಎಂದರು.
ವೇದಿಕೆಯಲ್ಲಿ ಶಿಶು ಅಭಿವೃದ್ದಿ ಇಲಾಖೆಯ ಪ್ರಬಾರ ಯೋಜನಾಧಿಕಾರಿ ಯಶೋಧ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಲೀಲಾವತಿ, ಶೀಲಾ ಉಪಸ್ಥಿತರಿದ್ದರು.