ನಾಪೋಕ್ಲು, ಏ. 16: ಕೊಳಕೇರಿ ಗ್ರಾಮದ ಅಭಿವೃದ್ದಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಲಕ್ಷಾಂತರ ರೂ. ಹಣ ಬಿಡುಗಡೆಯಾಗಿದ್ದರೂ ಸಮರ್ಪಕವಾಗಿ ಬಳಸದೆ ಗ್ರಾಮವನ್ನು ಕತ್ತಲೆಯಲ್ಲಿ ಇಡಲಾಗಿದೆ ಎಂದು ಕೊಳಕೇರಿ ಗ್ರಾಮಸ್ಥರು ಅಸಮಾಧಾನ ಹೊರಗೆಡಹಿದ್ದಾರೆ. ಕೊಳಕೇರಿ ಗ್ರಾಮದ ಮೂಟೇರಿ ಉಮಾಮಹೇಶ್ವರಿ ದೇವಾಲಯದ ಸಮೀಪ ಗ್ರಾಮಸ್ಥರು ಒಟ್ಟು ಸೇರಿ ಈ ಬಗ್ಗೆ ಮಾಹಿತಿ ನೀಡಿ ಹಳೆತಾಲೂಕು, ಬೊಮ್ಮಂಜಕೇರಿ ಹಾಗೂ ಕೊಳಕೇರಿ ಮುಖ್ಯರಸ್ತೆ ಕಳೆದ ಕೆಲವು ವರ್ಷಗಳಿಂದ ದುರಸ್ತಿಪಡಿಸದೆ ನಡೆದಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಬಂದ ಅನುದಾನವನ್ನು ನಿಯಮಾನುಸಾರ ಬಳಸದೆ ಇರುವದು ಒಂದು ಕಡೆಯಾದರೆ ಇನ್ನೊಂದು ಕಡೆ ಕಾಂಗ್ರೆಸ್ ಮುಖಂಡ ದಿವಂಗತ ಬಿ.ಟಿ. ಪ್ರದೀಪ್ ಅವರ ಪ್ರಯತ್ನದಿಂದ ಬಂದ ಅನುದಾನಗಳನ್ನು ಬಿಜೆಪಿಯವರು ತಾವು ಮಾಡಿದ್ದು ಎಂದು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕೂಡಲೇ ಈ ರಸ್ತೆಯನ್ನು ಡಾಮರೀಕರಣ ಮಾಡಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಜನಪ್ರತಿನಿಧಿಗಳು ಅಧಿಕಾರಿಗಳು ಅಭಿವೃದ್ಧಿಗೆ ಬಿಡುಗಡೆಯಾದ ಹಣವನ್ನು ಸಂಪೂರ್ಣ ಬಳಕೆ ಮಾಡಿ ಮಾಹಿತಿ ನೀಡುವದರ ಮೂಲಕ ಪಾರದರ್ಶಕತೆಯಿಂದ ನಡೆದುಕೊಳ್ಳುವಂತೆ ಬಿ.ಟಿ.ದಿನೇಶ್ ಹಾಗೂ ಜಿನ್ನುನಾಣಯ್ಯ ಆಗ್ರಹಿಸಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಹಾಗೂ ಉಪಾಧ್ಯಕ್ಷ ಕಾಳೆಯಂಡ ಸಾಬ ತಿಮ್ಮಯ್ಯ ಪ್ರತಿಕ್ರಿಯಿಸಿ ಕೊಳಕೇರಿ ಗ್ರಾಮವನ್ನು ಗ್ರಾಮವಿಕಾಸ ಯೋಜನೆಯಡಿ ನೋಂದಾಯಿಸಿದ್ದು, ಸುಮಾರು ರೂ. 75 ಲಕ್ಷ ಅನುದಾನವಿದೆ. ಇದರಲ್ಲಿ ಮುಖ್ಯವಾಗಿ ರಸ್ತೆ ಅಭಿವೃದ್ಧಿಗೆ ರೂ. 34 ಲಕ್ಷ ಅಲ್ಲದೆ ಆಟದ ಮೈದಾನ, ಕಸ ವಿಲೇವಾರಿ, ಇಂಟರ್ಲಾಕ್ ನಿರ್ಮಾಣ, ಸೋಲಾರ್ ದೀಪ ಸೇರಿದಂತೆ ಇತರ ಕೆಲಸಗಳು ಪ್ರಗತಿಯಲ್ಲಿದ್ದು ಮುಂದಿನ ಒಂದು ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ. ಪಂಚಾಯಿತಿ ಪಿಡಿಓ ನಿಯಮಾನುಸಾರ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಜನಪ್ರತಿನಿಧಿಗಳಿಗೆ ಮಾಹಿತಿ ದೊರಕದೆ ಸಮಸ್ಯೆಗೆ ಕಾರಣವಾಗುತ್ತಿದೆ. ಇವರು ಒಂದು ಪಕ್ಷದವರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಎಂದು ಆರೋಪಿಸಿ ಮೇಲಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ಸಂದರ್ಭ ಗ್ರಾಮಸ್ಥರಾದ ಅಪ್ಪಾರಂಡ ಅಪ್ಪಯ್ಯ, ಕೋಟೇರ ಮಂದಣ್ಣ, ಪುಲ್ಲೇರ ಭೀಮಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಟಿ.ಎ. ಮಹಮದ್, ಪುಲ್ಲೇರ ಪದ್ಮಿನಿ ಸೇರಿದಂತೆ ಇನ್ನಿತರರು ಇದ್ದರು.