ಸಿದ್ದಾಪುರ, ಏ. 13: ಕೊಡಗು ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸಿದ್ಧತೆಗಳು ಬಿರುಸಿನಿಂದ ನಡೆದಿದೆ.ಸಿದ್ದಾಪುರದ ಸಿಟಿ ಬಾಯ್ಸ್ ಯುವಕ ಸಂಘ ಸಿದ್ದಾಪುರದ ಪ್ರೌಢಶಾಲಾ ಮೈದಾನದಲ್ಲಿ ತಾ.15 ರಿಂದ ಕೊಡಗು ಚಾಂಪಿಯನ್ಸ್ ಲೀಗ್‍ನ 2 ನೇ ಆವೃತ್ತಿಗೆ ತಯಾರಿ ನಡೆಸಿದ್ದು, ಮೈದಾನ ಸೇರಿದಂತೆ ಸಕಲ ಸಿದ್ಧತೆಗಳು ಚುರುಕುಗೊಂಡಿದೆ. ಮೈದಾನ ತಳಿರು ತೋರಣ ಗಳಿಂದ ಕಂಗೊಳಿಸುತ್ತಿದ್ದು, ಕಳೆದ 5 ದಿನಗಳಿಂದ ಮೈದಾನ ತಯಾರಿ ಗೊಳಿಸುವ ಕೆಲಸ ನಡೆಯುತ್ತಿದೆ. ಸಿದ್ದಾಪುರ ಹಾಗೂ ನೆಲ್ಯಹುದಿಕೇರಿಯ ನೂರಾರು ಯುವಕರು ಮೈದಾನದ ಕೆಲಸದಲ್ಲಿ ತಲ್ಲೀನರಾಗಿದ್ದಾರೆ.

ಸಿದ್ದಾಪುರ ಪಟ್ಟಣದಲ್ಲಿ ಬೃಹತ್ ದ್ವಾರಗಳನ್ನು ನಿರ್ಮಿಸಲಾಗಿದ್ದು, ಬ್ಯಾನರ್ ಹಾಗೂ ಬಂಟಿಂಗ್ಸ್‍ಗಳು ಕಂಗೊಳಿಸುತ್ತಿವೆ.

ತಾ.15 ರಂದು ಬೆಳಗ್ಗೆ 9 ಗಂಟೆಗೆ ಅಂತರಾಷ್ಟ್ರೀಯ ಮ್ಯಾರಥಾನ್ ಪಟು ಹೊಸೋಕ್ಲು ಚಿಣ್ಣಪ್ಪ ಕ್ರೀಡಾ ಜ್ಯೋತಿಯನ್ನು ಮೈದಾನಕ್ಕೆ ತರಲಿದ್ದು, ಪಂದ್ಯಾವಳಿಯಲ್ಲಿ ಭಾಗವಹಿಸುವ 14 ತಂಡದ ಆಟಗಾರರು ಸಮವಸ್ತ್ರದೊಂದಿಗೆ ಡೊಳ್ಳು ಕುಣಿತ ಸೇರಿದಂತೆ ವಾದ್ಯ ಮೇಳಗಳೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ.

ಬೆಳಗ್ಗೆ 10 ಗಂಟೆಗೆ ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದು, ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಬೆಳಗ್ಗೆ 10.30 ಕ್ಕೆ ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಜಿಲ್ಲಾ ಪೊಲೀಸ್ ಕ್ರಿಕೆಟ್ ತಂಡಗಳ ನಡುವೆ ಪ್ರದರ್ಶನ ಪಂದ್ಯಾಟ ನಡೆಯಲಿದೆ.

ತಾ.20 ರಂದು ಫೈನಲ್ ಪಂದ್ಯಾವಳಿ ನಡೆಯಲಿದ್ದು, ಸಮಾರೋಪ ಸಮಾರಂಭದಲ್ಲಿ ರಾಜ್ಯ ಸಂಪುಟ ಸಚಿವರು, ಭಾರತ ಹಾಕಿ ತಂಡದ ಆಟಗಾರ ಸುನಿಲ್, ಕರ್ನಾಟಕ ರಣಜಿ ತಂಡದ ಆಟಗಾರ ಕೆ.ಬಿ ಪವನ್, ಪ್ರೋ ಕಬ್ಬಡ್ಡಿ ಆಟಗಾರ ಶಬೀರ್ ಬಾಪು, ಸುಖೇಶ್ ಹೆಗ್ಡೆ ಸೇರಿದಂತೆ ವಿವಿಧ ಕ್ರೀಡಾಪಟುಗಳು ಹಾಗೂ ಸಿನಿಮಾ ತಾರೆಯರು ಭಾಗವಹಿಸಲಿದ್ದಾರೆ.