ಏನ್ರಿ, ದಿಡ್ಡಳ್ಳಿಯಲ್ಲಿ ಅಷ್ಟು ಕುಟುಂಬಗಳು ಬಂದು ನೆಲೆ ಪಡೆಯುವಾಗ ಏನ್ ಮಾಡ್ತಿದ್ರಿ? ಏನು ಅವರೆಲ್ಲಾ ಒಂದೇ ದಿನ ದಿಡ್ಡಳ್ಳಿಗೆ ಬಂದ್ರ ? ಕಳೆದ 6 ತಿಂಗಳಿನಿಂದಲೂ ಆದಿವಾಸಿಗಳು ಬಂದು ಅಲ್ಲಿ ನೆಲೆಸುತ್ತಿದ್ದಾಗ ನಿಮ್ಮ ಜವಾಬ್ದಾರಿ ಏನಿತ್ತು ? ಎಂದು ಸಭೆಯಲ್ಲಿದ್ದ ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಅವರನ್ನು ಉದ್ದೇಶಿಸಿ ಪ್ರಶ್ನಿಸಿದ ಮುಖ್ಯಮಂತ್ರಿಗಳು, ನೀವು ಸರಿಯಾಗಿ ಕೆಲಸ ಮಾಡಿದ್ರೆ ಈ ಸಮಸ್ಯೆ ಇಷ್ಟೊಂದು ಜಟಿಲವಾಗುತ್ತಿರಲಿಲ್ಲ ಎಂದು ಅವರನ್ನು ತರಾಟೆಗೆ ತೆಗೆದುಕೊಂಡರು. ಈ ಮಧ್ಯೆ ಉತ್ತರ ನೀಡಲು ಮನೋಜ್ ಕುಮಾರ್ ಪ್ರಯತ್ನಿಸಿದಾಗ, ಮತ್ತೆ ಕೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಏನ್ ಗೆಸ್ಟ್ಹೌಸ್ಗಳಲ್ಲಿ ಮಜಾ ಉಡಾಯಿಸೋದೆ ನಿಮ್ಮ ಕೆಲ್ಸನಾ’? ಎಂದು ಖಾರವಾಗಿ ಪ್ರಶ್ನಿಸಿದರು.
ಸಭೆಯಲ್ಲಿದ್ದ ಪ್ರಬಾರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಆರಂಭದಲ್ಲಿ ‘ಏನಮ್ಮ ಕನ್ನಡದಲ್ಲಿ ಮಾತನಾಡುತ್ತಿಯಾ? ಎಂದು ಕೇಳಿದರು. ಈ ವೇಳೆ ಮಾತು ಆರಂಭಿಸಿದ ಚಾರುಲತಾ ಸೋಮಲ್ ದಿಡ್ಡಳ್ಳಿ ಭೂ ಪ್ರದೇಶ ಅರಣ್ಯ ಇಲಾಖೆಗೆ ಸೇರಿದ್ದು ಎಂದಾಗ ಎ.ಕೆ. ಸುಬ್ಬಯ್ಯ ಆಕ್ಷೇಪಿಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಮುಖ್ಯಮಂತ್ರಿ ‘ಪೈಸಾರಿ’ ಎಂದರೆ ಏನು ಎಂಬದನ್ನು ಈಗಾಗಲೇ ಎ.ಕೆ. ಸುಬ್ಬಯ್ಯ ಅವರು ಸಭೆಗೆ ವಿವರಿಸಿದ್ದಾರೆ. ಮತ್ತೆ ಪೈಸಾರಿ ಬಗ್ಗೆ ಗೊಂದಲ ಏಕೆ ಎಂದು ಪ್ರಶ್ನಿಸಿದರು. ಮತ್ತೆ ಮಾತು ಮುಂದುವರೆಸಿದ ಚಾರುಲತಾ, ಗೋದಾ ವÀÀರ್ಮ ತಿರುಮಲಪಾಡ್ ಪ್ರಕರಣದ ನ್ಯಾಯಾಲಯ ತೀರ್ಪು ಪ್ರಸ್ತಾಪಿಸಿದಾಗ ಎ.ಕೆ. ಸುಬ್ಬಯ್ಯ ಮತ್ತು ಸಚಿವ ಕಾಗೋಡು ತಿಮ್ಮಪ್ಪ ಕೆಂಡಾಮಂಡಲರಾದರು. ಈ ತೀರ್ಪಿನ ಆಧಾರದಲ್ಲಿ ಪೈಸಾರಿಯನ್ನು ಅರಣ್ಯ ಎಂದು ಬದಲಾಯಿಸಲಾಗಿದೆ ಎಂದು ಎ.ಕೆ. ಸುಬ್ಬಯ್ಯ ಹೇಳಿದರೆ, ‘ಗೋದವರ್ಮ ತಿರುಮಲಪಾಡ್’ ಎಂಬ ಪಿಶಾಚಿ ಇವರನ್ನು ಸದಾ ಕಾಡುತ್ತಿರುತ್ತದೆ ಎಂದು ಕಾಗೋಡು ತಿಮ್ಮಪ್ಪ ಅವರು ನುಡಿದರು. ಪಿಶಾಚಿಯನ್ನು ಬಿಡಿಸಲು ದೇವರ ಮೊರೆ ಹೋಗುವದು ಒಳಿತು ಎಂದು ಸಚಿವ ಕಾಗೋಡು ತಿಮ್ಮಪ್ಪ ವ್ಯಂಗ್ಯವಾಡಿದರು.
(ಮೊದಲ ಪುಟದಿಂದ)
ಸಭೆಯ ವಿಶೇಷತೆ : ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಸಭೆಗೆ ಹೋರಾಟ ಸಮಿತಿ ಪ್ರಮುಖರು ಮತ್ತು ಬಹುತೇಕ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಆಸೀನರಾಗಿದ್ದರು. ನಂತರ ಬಂದ ಸಚಿವ ರಮಾನಾಥ ರೈ ವೇದಿಕೆಯಲ್ಲಿ ಕುಳಿತವರು ಸ್ವಲ್ಪ ನಿದ್ದೆಗೆ ಜಾರಿದರು. ನಂತರ ಸಭೆ ಮುಗಿಯುವವರೆಗೂ ಹಾಗೆ ಕುಳಿತಿದ್ದರಲ್ಲದೆ, ಒಂದೇ ಒಂದು ಮಾತನ್ನು ಅವರಾಡಲಿಲ್ಲ. 11.35ಕ್ಕೆ ಮುಖ್ಯಮಂತ್ರಿ ಸಭಾಂಗಣ ಆಗಮಿಸಿದರು. ಆದರೆ ಸ್ವಾತಂತ್ರ್ಯ ಹೋರಾಟಗಾರÀ ದೊರೆಸ್ವಾಮಿ ಸಭೆಗೆ ಬರುವದು ಅಲ್ಪ ತಡವಾದ್ದರಿಂದ ಅವರಿಗಾಗಿ ಮುಖ್ಯಮಂತ್ರಿ ಕಾದರು. ನಂತರ ದೊರೆಸ್ವಾಮಿ ಅವರು ಸಭೆಗೆ ಬಂದ ಬಳಿಕ ಅವರು 100ನೇ ವರ್ಷಕ್ಕೆ ಪದಾರ್ಪಣೆ ಮಾಡಿದ ಹಿನ್ನೆಲೆಯಲ್ಲಿ ಸರಕಾರದ ಪರ ಅವರನ್ನು ಮುಖ್ಯಮಂತ್ರಿಗಳು ಅಭಿನಂದಿಸಿದರು. ಬಳಿಕ 11.45ಕ್ಕೆ ಸಭೆ ಆರಂಭವಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಹಾಗೂ ಕೊಡಗಿನ ಜನಪ್ರತಿನಿಧಿಗಳು ಗೈರು ಹಾಜರಾಗಿದ್ದರು.