ಕುಶಾಲನಗರ, ಮಾ. 25: ಕುಶಾಲನಗರ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿಗೊಳಿಸುವ ಹಿನ್ನಲೆಯಲ್ಲಿ ಸರ್ವೆ ಕಾರ್ಯ ನಡೆಯುತ್ತಿದ್ದು ರಸ್ತೆ ಬದಿಯ ವರ್ತಕರು ಆತಂಕಕ್ಕೆ ಒಳಗಾಗಿರುವುದು ಕಂಡುಬಂದಿದೆ.ಬೆಂಗಳೂರಿನಿಂದ ಜಿಲ್ಲೆಯ ಮೂಲಕ ಹಾದುಹೋಗುವ ಎನ್‍ಹೆಚ್ 275 ಮಾರ್ಗ ಕಳೆದ 1 ವರ್ಷದ ಹಿಂದೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ್ದು ಈಗಾಗಲೇ ರಸ್ತೆಯನ್ನು ಹೆದ್ದಾರಿ ಪ್ರಾಧಿಕಾರಕ್ಕೆ ವರ್ಗಾಯಿಸಲಾಗಿದೆ. ಬೆಂಗಳೂರಿನಿಂದ ಮೈಸೂರು, ಮೈಸೂರಿನಿಂದ ಮಡಿಕೇರಿ ಮೂಲಕ ಬಂಟ್ವಾಳ ರಸ್ತೆಯ ಸರ್ವೆ ಕಾರ್ಯ ಖಾಸಗಿ ಕಂಪನಿಗಳಿಗೆ ವಹಿಸಲಾಗಿದ್ದು ಬಹುತೇಕ ಕೆಲಸ ಪೂರ್ಣಗೊಂಡಿದೆ.

ಈ ನಡುವೆ ಹೆದ್ದಾರಿ ಅಭಿವೃದ್ಧಿಗೊಳಿಸುವ ಸಂದರ್ಭ ಜಿಲ್ಲೆಯ ಕುಶಾಲನಗರ, ಸುಂಟಿಕೊಪ್ಪ ಸೇರಿದಂತೆ ಪಿರಿಯಾಪಟ್ಟಣ ಮತ್ತು ಸುಳ್ಯ ಪಟ್ಟಣಗಳ ವ್ಯಾಪ್ತಿಯಲ್ಲಿ ಬೈಪಾಸ್ ರಸ್ತೆಗೆ ಪ್ರಸ್ತಾವನೆ ಕೇಳಿಬಂದಿತ್ತು. ಆದರೆ ಇದೀಗ ಸರ್ವೆ ಕಾರ್ಯ ನಡೆಸುತ್ತಿರುವ ಹಿನ್ನಲೆಯಲ್ಲಿ ಈ ಭಾಗದ ರಸ್ತೆ ಬದಿ ಕಟ್ಟಡದ ಮಾಲೀಕರು ಮತ್ತು ವರ್ತಕರು ದಿಗಿಲುಗೊಳ್ಳುವಂತೆ ಮಾಡಿದೆ. ಈ ಸಂಬಂಧ ಇತ್ತೀಚೆಗೆ ನಡೆದ ಕುಶಾಲನಗರ ಛೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿಯ ಮಹಾಸಭೆಯಲ್ಲಿ ಚರ್ಚೆಗೆ ಬಂದು ಹೆದ್ದಾರಿ ರಸ್ತೆಯ ಸ್ಪಷ್ಟ ಮಾಹಿತಿಯನ್ನು ಕಲೆಹಾಕಲು

(ಮೊದಲ ಪುಟದಿಂದ) ನಿಯೋಗವೊಂದು ತೆರಳಲು ನಿರ್ಧರಿಸಲಾಗಿದೆ. ಒಂದು ವೇಳೆ ಕುಶಾಲನಗರ ಮತ್ತು ಸುಂಟಿಕೊಪ್ಪ ಪಟ್ಟಣ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಹಾದುಹೋದಲ್ಲಿ ಬಹುತೇಕ ಕಟ್ಟಡಗಳನ್ನು ತೆರವುಗೊಳಿಸಬೇಕಾದ ಪರಿಸ್ಥಿತಿ ಸೃಷ್ಠಿಯಾಗಲಿದೆ. ನಿಯಮಾನುಸಾರ ರಸ್ತೆ ಅಗಲೀಕರಣಗೊಂಡಲ್ಲಿ ಈ ವ್ಯಾಪ್ತಿಯ ಬಹುತೇಕ ವರ್ತಕರು ಹಾಗೂ ಕಟ್ಟಡ ಮಾಲೀಕರು ಭಾರೀ ನಷ್ಟಕ್ಕೆ ಒಳಗಾಗುವ ಆತಂಕ ಎದುರಾಗಿದೆ. ಕುಶಾಲನಗರದ ಸಮೀಪ ಕೊಪ್ಪ ಬಳಿ ಚಿಕ್ಕಹೊಸೂರು ಗ್ರಾಮದ ಮೂಲಕ ಕುಶಾಲನಗರದ ಸರಕಾರಿ ಪಾಲಿಟೆಕ್ನಿಕ್ ಎದುರುಭಾಗದ ಸಂಪರ್ಕದೊಂದಿಗೆ ಬೈಪಾಸ್ ರಸ್ತೆ ನಿರ್ಮಾಣದ ಪ್ರಸ್ತಾವನೆ ಹಿನ್ನಲೆಯಲ್ಲಿ ಈ ಹಿಂದೆ ಸರ್ವೆ ಕಾರ್ಯ ನಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.

ಬೆಂಗಳೂರು ಬಂಟ್ವಾಳ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜಲೇಂದ್ರ ಅವರು ಮಾಹಿತಿ ನೀಡಿದ್ದು, ಬೈಪಾಸ್ ರಸ್ತೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ ಎಂದು ಖಚಿತಪಡಿಸಿದ್ದಾರೆ. ಸಧ್ಯದಲ್ಲಿಯೇ ರಸ್ತೆಯ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗೆ ಚಾಲನೆ ದೊರೆಯಲಿದ್ದು ಈ ನಡುವೆ ಬೈಪಾಸ್ ರಸ್ತೆ ನಿರ್ಮಾಣದ ಬಗ್ಗೆ ಮಾಹಿತಿಗಳು ಲಭಿಸಲಿವೆ ಎಂದು ತಿಳಿಸಿದ್ದಾರೆ.

ಪಟ್ಟಣದ ನಡುವೆ ಹೆದ್ದಾರಿ ರಸ್ತೆ ಹಾದುಹೋದಲ್ಲಿ ಕುಶಾಲನಗರ ಮತ್ತು ಸುಂಟಿಕೊಪ್ಪ ಪಟ್ಟಣದ ವರ್ತಕರು ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದು ಪ್ರತಿಕ್ರಿಯಿಸಿರುವ ಜಿಲ್ಲಾ ಛೇಂಬರ್ ಆಫ್ ಕಾಮರ್ಸ್‍ನ ಉಪಾಧ್ಯಕ್ಷರಾದ ಬಿ.ಆರ್.ನಾಗೇಂದ್ರಪ್ರಸಾದ್ ಈ ಬಗ್ಗೆ ಸಂಬಂಧಿಸಿದವರ ಬಳಿ ನಿಯೋಗ ತೆರಳಿ ಪರ್ಯಾಯ ಯೋಜನೆಗೆ ಒತ್ತಾಯ ಮಾಡಲಾಗುವದು ಎಂದಿದ್ದಾರೆ.

ಒಟ್ಟಾರೆ ಕಾಲ ಮಿಂಚುವ ಮುನ್ನವೇ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಲು ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘಸಂಸ್ಥೆಗಳು ಪ್ರಯತ್ನಿಸಬೇಕಾಗಿದೆ.