ಮಡಿಕೇರಿ, ಮಾ. 25: ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾದ ನಂತರ ಕೊಡಗು ಜಿಲ್ಲೆ ಸರ್ವಾಂಗೀಣ ಅಭಿವೃದ್ಧಿ ಹೊಂದಲಿದೆ ಎಂದು ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ ತುಳಸಿದಾಸ್ ಅಭಿಪ್ರಾಯಪಟ್ಟರು.ನಗರದಲ್ಲಿ ಕಣ್ಣೂರು ವಿಮಾನ ನಿಲ್ದಾಣದಿಂದಾಗಿ ಜಿಲ್ಲೆಗೆ ಆಗುವ ಪ್ರಯೋಜನಗಳ ಕುರಿತು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.
ವಿಮಾನ ನಿಲ್ದಾಣದ ಕಾಮಗಾರಿ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಮೇ ಅಂತ್ಯಕ್ಕೆ ಎಲ್ಲಾ ಕಾಮಗಾರಿ ಪೂರ್ಣಗೊಳ್ಳಲಿದೆ. ಜೂನ್‍ನಿಂದ 3 ತಿಂಗಳ ಕಾಲ ಪರೀಕ್ಷಾರ್ಥ ಹಾರಾಟ ನಡೆಯಲಿದ್ದು, ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಪರವಾನಗಿ ದೊರೆಯುವ ವಿಶ್ವಾಸವಿದೆ. ಸೆಪ್ಟೆಂಬರ್‍ನಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದರು. 2013 ರಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಆರಂಭವಾಯಿತು. ರನ್‍ವೇ ಸಂಪೂರ್ಣವಾಗಿ ಪೂರ್ಣಗೊಂಡಿದೆ. ಟರ್ಮಿನಲ್ ಕೂಡಾ ಕೊನೆ ಹಂತದಲ್ಲಿದ್ದು, ಯಂತ್ರೋಪಕರಣಗಳ ಜೋಡಣೆ ನಡೆಯುತ್ತಿದೆ ಎಂದರು.
ಮೊದಲ ಹಂತದಲ್ಲಿ 3,050 ಮೀಟರ್ ಅಂದರೆ ಹತ್ತು ಸಾವಿರ ಅಡಿಗಳ ರನ್‍ವೇ ಬಳಕೆಗೆ ಲಭ್ಯವಾಗಲಿದೆ. ಬಳಿಕ ಎರಡನೇ ಹಂತದಲ್ಲಿ ಈ ರನ್‍ವೇಯನ್ನು 3,400 ಮೀಟರ್‍ಗಳಿಗೆ ವಿಸ್ತರಿಸಲಾಗುವದು. ಮೂರನೇ ಹಂತದಲ್ಲಿ 4000 ಮೀಟರ್‍ಗಳ ರನ್‍ವೇ ಸಿದ್ಧವಾಗಲಿದೆ. ಇದರಿಂದಾಗಿ ದೇಶದಲ್ಲಿಯೇ ಪ್ರಮುಖ ವಿಮಾನ ನಿಲ್ದಾಣವಾಗಲಿದೆ. ಆರಂಭದಲ್ಲಿ ವರ್ಷಕ್ಕೆ 1.5 ಮಿಲಿಯನ್ ಪ್ರಯಾಣಿಕರನ್ನು ನಿರೀಕ್ಷಿಸಲಾಗಿದೆ. ನಂತರದ ದಿನಗಳಲ್ಲಿ ಈ ಸಂಖ್ಯೆ 9 ಮಿಲಿಯನ್‍ಗೆ ಏರಿಕೆಯಾಗಲಿದೆ ಎಂದು ಹೇಳಿದರು.
ಸಾಕಷ್ಟು ವರ್ಷಗಳ ಭವಿಷ್ಯದ ದೃಷ್ಟಿಕೋನವನ್ನು ಹೊಂದಿ ಕಣ್ಣೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ವಾಗುತ್ತಿದೆ. ಟರ್ಮಿನಲ್ 10 ಲಕ್ಷ ಚದರ ಅಡಿಗಳ ವಿಸ್ತೀರ್ಣ ಹೊಂದಿದ್ದು, ಎಂತಹ ಒತ್ತಡವನ್ನು ಬೇಕಾದರೂ ತಡೆದುಕೊಳ್ಳಲಿದೆ. ಆರಂಭದಲ್ಲಿ 20 ವಿಮಾನಗಳು ನಿಲ್ಲುವ ಸೌಲಭ್ಯವಿದ್ದು, ನಂತರದ ದಿನಗಳಲ್ಲಿ ಈ ಸಾಮಥ್ರ್ಯ ದ್ವಿಗುಣಗೊಳ್ಳಲಿದೆ. ಕೇಂದ್ರ ಸರಕಾರ, ಕೇರಳ ಸರಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ವಾಗುತ್ತಿದ್ದು, 5000 ಷೇರುದಾರರಿದ್ದಾರೆ ಎಂದರು.
ಮುಖ್ಯವಾಗಿ ಕೊಡಗಿನಲ್ಲಿ ಹೈಟೆಕ್ ಕೃಷಿ ಪದ್ಧತಿಯನ್ನು ಅಳವಡಿಸಲು ಪ್ರೋತ್ಸಾಹ ನೀಡಲಾಗುವದು. ಕಡಿಮೆ ಜಾಗದಲ್ಲಿ ಗುಣಮಟ್ಟದ ಹೆಚ್ಚು ಫಸಲು ಪಡೆಯುವದರಿಂದ ಇವುಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ನೇರವಾಗಿ ಪೂರೈಸಬಹುದಾಗಿದೆ. ಅದೇ ರೀತಿ ಕೊಡಗು ಪುಷ್ಪೋದ್ಯಮಕ್ಕೆ ಸೂಕ್ತ ವಾತಾವರಣವನ್ನು ಹೊಂದಿರುವದರಿಂದ ಇಲ್ಲಿ ಹೂವುಗಳಿಗೆ ಸಾಕಷ್ಟು ಬೇಡಿಕೆ ಬರಲಿದೆ. ಇಲ್ಲಿಂದ ಪೂರೈಕೆಯಾಗುವ ತರಕಾರಿ, ಹೂವುಗಳನ್ನು ಶೇಖರಿಸಿಡಲು ವಿಮಾನ ನಿಲ್ದಾಣದಲ್ಲಿ ಶೀತಲೀಕರಣ ಘಟಕವನ್ನು ಸ್ಥಾಪಿಸಲಾಗುತ್ತಿದೆ ಎಂದರು.
ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದಾಗಿ ಜಿಲ್ಲೆಗೆ ಸಾಕಷ್ಟು ಪ್ರಯೋಜನವಾಗಲಿದೆ. ಈಗ ಕಣ್ಣೂರಿನಿಂದ ಮಡಿಕೇರಿಗೆ 2.30 ಗಂಟೆಗಳ ಪ್ರಯಾಣವಿದ್ದು, ಕೊಡಗಿಗೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಕೇರಳ ಭಾಗದಲ್ಲಿ ಜಿಲ್ಲೆಯ ಗಡಿ ತನಕ ರಸ್ತೆ ವಿಸ್ತರಣೆ, ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದು ಪೂರ್ಣಗೊಂಡ ನಂತರ ಕೇವಲ 2 ಗಂಟೆಯಲ್ಲಿ ಮಡಿಕೇರಿ ಹಾಗೂ 1.30 ಗಂಟೆಯಲ್ಲಿ ವೀರಾಜಪೇಟೆಗೆ ತಲಪಬಹುದಾಗಿದೆ. ಅಂತರರಾಷ್ಟ್ರೀಯ ವಿಮಾನಗಳು ಇಲ್ಲಿ ಬಂದಿಳಿಯು ವದರಿಂದ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ, ಕೊಲ್ಲಿ ರಾಷ್ಟ್ರಗಳಿಗೆ ನೇರ ಸಂಪರ್ಕ ಹೊಂದಲಿದೆ. ಇದರಿಂದಾಗಿ ವಾಣಿಜ್ಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮದಲ್ಲಿ ಗಣನೀಯ ಪ್ರಮಾಣ ಅಭಿವೃದ್ಧಿಯನ್ನು ಕಾಣಬಹುದಾಗಿದೆ ಎಂದು ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ ತುಳಸಿದಾಸ್ ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ಪ್ರವಾಸೋದ್ಯಮದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಈ ವಿಮಾನ ನಿಲ್ದಾಣದಿಂದ ಹೆಚ್ಚು ಪ್ರಯೋಜನವಾಗಬಹುದು. ಈಗಾಗಲೇ ಜಿಲ್ಲೆಯಲ್ಲಿ 3000 ಕ್ಕೂ ಹೆಚ್ಚು ಹೋಂಸ್ಟೇಗಳಿವೆ. ಅದೇ ರೀತಿ ಇಲ್ಲಿನ ವಾಹನಗಳಿಗೆ, ಫಲಪುಷ್ಪ ಹಾಗೂ ಸಾಂಬಾರು ಪದಾರ್ಥಗಳಿಗೆ ಬೇಡಿಕೆ ಬರುವ ನಿರೀಕ್ಷೆ ಇದೆ ಎಂದು ಅಭಿಪ್ರಾಯಪಟ್ಟರು.
ಕೊಡಗು ಟೂರಿಸಂ ಅಸೋಸಿಯೇಶನ್‍ನ ಅಧ್ಯಕ್ಷ ಚೆಯ್ಯಂಡ ಸತ್ಯ ಮಾತನಾಡಿ, ಕೇರಳದಲ್ಲಿ ಕರ್ನಾಟಕದ ವಾಹನಗಳಿಗೆ ಹೆಚ್ಚುವರಿ ತೆರಿಗೆ ವಿಧಿಸಲಾಗುತ್ತಿದೆ. ಇದು ಪ್ರಯಾಣಿಕರಿಗೆ ಹೊರೆಯಾಗುತ್ತಿದೆ. ಅದೇ ರೀತಿ ಕೇರಳ ಕೂಡ ನಮ್ಮಲ್ಲಿ ಹೆಚ್ಚು ತೆರಿಗೆ ಎಂದು ಆರೋಪಿಸುತ್ತವೆ. ಈ ಕುರಿತು ಸಂಬಂಧಪಟ್ಟವರು ಮಾತುಕತೆ ನಡೆಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚೇಂಬರ್ ಆಫ್ ಕಾಮರ್ಸ್‍ನ ಬಿ.ಎನ್. ಪ್ರಕಾಶ್, ಜಿ. ಚಿದ್ವಿಲಾಸ್, ಕೇಶವ್ ಕಾಮತ್, ನಾಗೇಂದ್ರ ಪ್ರಸಾದ್, ಮೋಂತಿ ಗಣೇಶ್, ಕಣ್ಣೂರು ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ದೀಪಕ್, ಅತಿಥಿ ಹೊಟೇಲ್‍ನ ಮಾಲೀಕ ಭಾಸ್ಕರ್ ಮತ್ತಿತರರು ಇದ್ದರು.