ಮಡಿಕೇರಿ, ಮಾ. 25: ಬಾಡಗ ಬಾಣಂಗಾಲದ ಹೃದಯ ಭಾಗದಲ್ಲಿ (ಹುಡಿಯಲ್ಲಿ) ಪಟ್ಟಮಾಡ ಕುಟುಂಬಕ್ಕೆ ಸೇರಿದ ಕಾಫಿ ತೋಟವಿದೆ. ಮುಖ್ಯ ರಸ್ತೆಯಿಂದ ಕಿರಿದಾದ ಒಳದಾರಿಯಲ್ಲಿ ತೆರಳುವಾಗ ಅತ್ತಿತ್ತ ಬೆಳೆದು ನಿಂತ ಮರ, ಎಡ ಭಾಗದಲ್ಲೊಂದು ಸುಂದರ ಕೆರೆ, ಸಂಜೆಯ ಸೂರ್ಯನÀ ಬೆಳಕಿನಿಂದ ನೀರಿನಲ್ಲಿ ಬಾಗಿದ ಮರಗಳ ಪ್ರತಿಬಿಂಬ, ಹಾರುವ ಕೊಕ್ಕರೆಗಳನ್ನು ಕಾಣುವಾಗ ಭೂಮಿ ಮೇಲಿನ ಸ್ವರ್ಗದ ತುಂಡೊಂದು ಅಲ್ಲಿರುವಂತೆ ಭಾಸವಾಗುತ್ತದೆ. ಅಂತಲ್ಲಿ ವಾಸವಿರುವವರ ಬಗ್ಗೆ ಅಸೂಯೆಯಾದರೂ ಅಚ್ಚರಿ ಇಲ್ಲ. ಆದರೆ ಒಳಸತ್ಯ ಬೇರೆಯೇ ಇದೆ. ಅಂತಹ ತೋಟಗಳೊಳಗೆ, ಸುಂದರ ಮನೆಗಳೊಳಗೆ ವಾಸಿಸುವ ಬೆಳೆಗಾರರು, ದುಡಿಯುವ ಕೆಲಸದವರ ಜೀವಕ್ಕೆ ಯಾವದೇ ಭರವಸೆ ಇಲ್ಲ. ಹಗಲು-ರಾತ್ರಿ ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಆನೆಗಳು ಧಾಳಿ ಮಾಡುತ್ತವೆ. ಬೆಳೆನಾಶ ಮಾಡುತ್ತವೆ. ಪ್ರಾಣಭಯ ಒಡ್ಡುತ್ತವೆ.

ಇಂತಹ ಪ್ರಾಣಭಯಕ್ಕೆ ಒಳಗಾಗಿ, ಆನೆ ಧಾಳಿಯಿಂದ ಕೈ ಮತ್ತು ಪಕ್ಕೆಯ ಮೂಳೆಗಳನ್ನು ಮುರಿದುಕೊಂಡ ಎಪ್ಪತ್ತಾರು ವಯಸ್ಸಿನ ಪಟ್ಟಮಾಡ ನಂಜಪ್ಪ ಅವರನ್ನು ‘ಶಕ್ತಿ’ ಭೇಟಿ ಮಾಡಿತು.

ತಾ. 18 ರಂದು ಬೆಳಿಗ್ಗೆ ನಂಜಪ್ಪ ಅವರ ತೋಟದೊಳಗೆ ಎರಡು ಆನೆ ಕಂಡು ಬಂದಿವೆ. ‘ಯಜಮಾನ, ಮಂಟಿ ಮೇಲೆ ಎರಡು ಆನೆ ನಿಂತಿದೆ-ನಾವು ನೋಡಿ ಓಡಿ ಬಂದೆವು, ಕೆಲಸ ಮಾಡಲು ಭಯವಾಗುತ್ತೆ’ ಎಂದು ಕೆಲಸದವರು ನಂಜಪ್ಪ ಅವರ ಮನೆಗೆ ಬಂದು ಹೇಳುತ್ತಾರೆ. ಕೈಯಲ್ಲಿ ಒಂದು ಕತ್ತಿ ಮತ್ತು ಕೋಲು ಹಿಡಿದ ನಂಜಪ್ಪ ಆನೆಯಿದ್ದ ಜಾಗದತ್ತ ಹೆಜ್ಜೆ ಹಾಕಿದ್ದಾರೆ. ಸುಮಾರು ನೂರು ಅಡಿ ದೂರದಲ್ಲಿ ಎರಡು ಆನೆಗಳು ನಿಂತಿವೆ. ಸ್ವಲ್ಪ ಹೊತ್ತು ಅವನ್ನು ಗಮನಿಸಿದ ನಂಜಪ್ಪ ಹಿಂತಿರುಗಲು ತಿರುಗುತ್ತಾರೆ. ನೋಡ ನೋಡುತ್ತಿದ್ದಂತೇ ಇವರ ಹಿಂದೆ ಅವಿತಿದ್ದ ಮತ್ತೊಂದು ಆನೆ ಓಡಿ ಬರಲಾರಂಭಿಸುತ್ತದೆ. ಎರಡೂ ಕಿವಿಗಳನ್ನು ಅಗಲಿಸಿಕೊಂಡು, ಘೀಳಿಡುತ್ತಾ ಓಡಿ ಬಂದ ಆನೆ ನಂಜಪ್ಪ ಅವರನ್ನು ಸೊಂಡಿಲಿನಿಂದ ಹೊಡೆದು ಉರುಳಿಸುತ್ತದೆ. ಅವರ ಟೊಪ್ಪಿ ಮತ್ತು ಕನ್ನಡಕ ಹಾರಿದರೂ ಕೈಯಲ್ಲಿದ್ದ ಕತ್ತಿ ಮತ್ತು ಕೋಲನ್ನು ಆನೆಯ ಸೊಂಡಿಲಿಗೆ ಬೀಸಲಾರಂಭಿಸುತ್ತಾರೆ. ಕೋಪಗೊಂಡ ಆನೆ ಎರಡೂ ಕಾಲನ್ನು ನೆಲಕ್ಕೆ ಮಂಡಿಯೂರಿ ಹಣೆಯಿಂದ ಅವರಿಗೆ ಗುದ್ದಲಾರಂಭಿಸುತ್ತದೆ. ಇನ್ನು ಸತ್ತಂತೆಯೇ ಎಂದು ನಂಜಪ್ಪ ಭಾವಿಸುತ್ತಾರೆ. ಆದರೆ ಆನೆ ಹಣೆಯಿಂದ ಅವರನ್ನು ಒಮ್ಮೆ ನೆಲದಲ್ಲಿ ಜಾರಿಸಿ ತಳ್ಳುತ್ತದೆ. ಸ್ಥಳದಿಂದ ಸ್ವಲ್ಪ ದೂರ ಹೋಗಿ ನಿಲ್ಲುತ್ತದೆ.

ಏಳಲಾಗುತ್ತಿರಲಿಲ್ಲ, ನಿಲ್ಲಲಾಗುತ್ತಿರಲಿಲ್ಲ. ನಂಜಪ್ಪ ಮೆಲ್ಲನೆ ತಲೆ ಎತ್ತಿ ನೋಡುತ್ತಾರೆ. ದೂರ ನಿಂತಿದ್ದ ಆನೆ ಮತ್ತೆ ಇವರೆಡೆ ಬರಲಾರಂಭಿಸುತ್ತದೆ. ಇವರು ತೋಡೊಂದರ ಬದಿ ಏರಿಯ ಮೇಲೆ ಮುದುಡಿ ಬಿದ್ದಿದ್ದಾರೆ. ಮತ್ತೆ ಆನೆ ಬಳಿ ಬಂದರೆ ಸಾವು ನಿಶ್ಚಿತ ಎಂದು ತೀರ್ಮಾನಿಸಿದ ಅವರು ಏರಿಯಿಂದ ದೊಪ್ಪನೆ ತೋಡಿನ ನೀರಿಗೆ ಉರುಳಿ ಬೀಳುತ್ತಾರೆ. ಅಲ್ಲಿಗೂ ಆನೆ ಬರುತ್ತದೆ. ತೋಡಿನ ಒಂದು ಬದಿ ಮೋರಿಯೊಂದು ಇರುತ್ತದೆ. ನಂಜಪ್ಪ ಮೋರಿಯೊಳಗೆ ತೆವಳಿ ನುಗ್ಗಿ ಜೀವ ಉಳಿಸಿಕೊಳ್ಳುತ್ತಾರೆ. ಇಷ್ಟಾದರೂ ಜೇಬಿನೊಳಗಿನ ಮೊಬೈಲ್ ಫೋನ್ ಭದ್ರವಾಗಿರುತ್ತದೆ. ಮನೆಗೆ ಕರೆ ಮಾಡಲು ಫೋನ್ ತೆಗೆಯಲು ತಡಕಾಡುತ್ತಾರೆ. ಅಷ್ಟರಲ್ಲಿ ಮನೆಗೆ ಆನೆಯ ಘೀಳಿಡುವಿಕೆ-ಇವರ ಬೊಬ್ಬೆ ಕೇಳಿರುತ್ತದೆ. ಮನೆಯಿಂದ ಇವರಿಗೆ ದೂರವಾಣಿ ಕರೆ ಬರುತ್ತದೆ. ತಾನು ಮೋರಿಯೊಳಗೆ ಅಡಗಿರುವದಾಗಿ ನಂಜಪ್ಪ ಹೇಳುತ್ತಾರೆ. ಮನೆಯವರು ಬಂದಾಗ ಆನೆ ಕಣ್ಮರೆಯಾಗಿತ್ತು.

ನಂಜಪ್ಪ ಅವರ ಪುತ್ರ ವಿವಿನ್ ಅವರ ಮೇಲೂ 8 ತಿಂಗಳ ಹಿಂದೆ ಆನೆ ಇದೇ ರೀತಿ ಧಾಳಿ ಮಾಡಿ ಅವರು ಸಾವಿನಿಂದ ಪಾರಾಗಿದ್ದಾರೆ. ಎಪ್ಪತ್ತಾರರ ವಯಸ್ಸಿನಲ್ಲೂ ಚಟುವಟಿಕೆಯ ಚಿಲುಮೆಯಂತೆ ಗಟ್ಟಿಮುಟ್ಟಾಗಿ ಓಡಾಡುವ ನಂಜಪ್ಪ ಅವರು ಆನೆಗೆ ಸವಾಲಾಗಿ ನಿಂತದ್ದು ಶ್ಲಾಘನೀಯ. ಆದರೆ ಈ ವಯಸ್ಸಿನಲ್ಲೂ ಅವರು-ಅವರಂತಹ ನೂರಾರು ಬೆಳೆಗಾರರು-ಅವರೊಂದಿಗೆ ದುಡಿಯುತ್ತಿರುವವರು ಅರೆಗಳಿಗೆ ನೆಮ್ಮದಿಯಿಂದ ಇರಲು ಅಸಾಧ್ಯವಾದ ಪರಿಸ್ಥಿತಿ ಉದ್ಭವವಾಗಿರುವದು, ಆನೆ ಸಮಸ್ಯೆಗೆ ಪರಿಹಾರ ದೊರಕದಿರುವದು ಇಂದಿನ ಸತ್ಯ.

ಆನೆ ಸಮಸ್ಯೆಯಿಂದ ನೊಂದಿರುವ ಕೊಡಗಿನ ಎಲ್ಲ ಸಂತ್ರಸ್ಥರದ್ದು ನೋವಿನ ಬದುಕು. -ಬಿ.ಜಿ. ಅನಂತಶಯನ