ಮಡಿಕೇರಿ, ಮಾ. 24: ಕುಶಾಲನಗರವನ್ನು ಕೇಂದ್ರವಾಗಿರಿಸಿ ಕೊಂಡ ಕಾವೇರಿ ತಾಲೂಕು ರಚನೆಯ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿರುವ ಕಾವೇರಿ ತಾಲೂಕು ಹೋರಾಟ ಸಮಿತಿ ನೂತನ ತಾಲೂಕಿಗೆ ಒಳಪಡುವ 19 ಗ್ರಾಮ ಪಂಚಾಯ್ತಿ ಸ್ಥಾನೀಯ ಸಮಿತಿಗಳಿಗೆ ಮತ್ತಷ್ಟು ಬಲ ತುಂಬಲು ನಿರ್ಧರಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ತಾಲೂಕು ರಚನೆಯ ಹೋರಾಟಕ್ಕೆ ಹಿನ್ನಡೆಯಾಗಿಲ್ಲವೆಂದು ಸ್ಪಷ್ಟಪಡಿಸಿದರು. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವದರಿಂದ ಕಾವೇರಿ ತಾಲೂಕನ್ನು ಬೆಂಬಲಿಸು ವವರಿಗೆ ಮಾತ್ರ ಮತ ಎನ್ನುವ ಹೊಸ ಹೋರಾಟದ ಹಾದಿಯನ್ನು ಕಂಡುಕೊಳ್ಳುವ ಮೂಲಕ ಮುನ್ನಡೆಯುವದಾಗಿ ತಿಳಿಸಿದರು.
ರಾಜಕೀಯವಾಗಿ 19 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರನ್ನು ಕಡೆಗಣಿಸುವಂತಿಲ್ಲವೆಂದು ಅಭಿಪ್ರಾಯಪಟ್ಟ ಅವರು, ಜನಜಾಗೃತಿ ಮತ್ತು ಜನಾಂದೋಲನದ ಮೂಲಕ ಕಾವೇರಿ ತಾಲೂಕನ್ನು ಪಡೆಯುವದಾಗಿ ತಿಳಿಸಿದರು.
ಎರಡು ತಿಂಗಳ ಹಿಂದೆ ಕುಶಾಲನಗರಕ್ಕೆ ವಿಶೇಷ ತಹಶೀಲ್ದಾರರನ್ನು ನೇಮಿಸಬೇಕೆನ್ನುವ ಪ್ರಸ್ತಾವನೆಗೆ ಮುಖ್ಯಮಂತ್ರಿಗಳು ಸಹಿ ಹಾಕಿದ ಹಿನ್ನೆಲೆಯಲ್ಲಿ ತಾಲೂಕು ರಚನೆಯ ಬೇಡಿಕೆಯಲ್ಲಿ ಸಮಿತಿ ಮೈಮರೆತದ್ದು ನಿಜವೆಂದು ಶಶಿಧರ್ ಒಪ್ಪಿಕೊಂಡರು.
ಕಾವೇರಿ ತಾಲೂಕು ರಚನೆ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಕನಸಾಗಿದ್ದು, ಇದೀಗ ಅವರ ಪುತ್ರ ದಿನೇಶ್ ಗುಂಡೂರಾವ್ ಅವರು ಹೋರಾಟಕ್ಕೆ ಪೂರಕವಾಗಿ ಬೆಂಬಲ ನೀಡುತ್ತಿದ್ದಾರೆ.
ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಕೂಡ ಅಧಿವೇಶನದಲ್ಲಿ ಕಾವೇರಿ ತಾಲೂಕು ರಚನೆಯ ಕುರಿತು ಪ್ರಸ್ತಾಪಿಸಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.
ಗೋಷ್ಠಿಯಲ್ಲಿ ಸಮಿತಿಯ ಪ್ರಮುಖರು ಹಾಗೂ ಜಿ.ಪಂ. ಸದಸ್ಯರಾದ ಕೆ.ಪಿ. ಚಂದ್ರಕಲಾ, ಮಂಜುಳಾ, ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯ ಶರವಣ ಕುಮಾರ್ ಹಾಗೂ ಬಿಜೆÉಪಿ ಪ್ರಮುಖ ಎಂ.ವಿ. ನಾರಾಯಣ ಉಪಸ್ಥಿತರಿದ್ದರು.